ಬೆಂಗಳೂರು: ‘ನಾನು ತಪ್ಪು ಮಾಡಿಲ್ಲ ಎಂದರೆ ನನಗೆ ಯಾರೂ ಸಮಯ ಕೊಡುವ ಅವಶ್ಯಕತೆ ಇಲ್ಲ. ನನ್ನ ಹಾಗೂ ದರ್ಶನ್ ಅವರ ನಡುವಿನ ಒಡನಾಟ ಚೆನ್ನಾಗಿಯೇ ಇದೆ. ದರ್ಶನ್ ಅವರು ಒಳಗೊಂದು ಹೊರಗೊಂದು ಇಲ್ಲ. ಅವರು ಏನಿದ್ದರೂ ನೇರವಾಗಿಯೇ ಹೇಳುತ್ತಾರೆ. ನನ್ನ ಸ್ವಭಾವವೂ ಇದೆ. ನಮ್ಮಿಬ್ಬರು ನಡುವಿನ ಸಂಬಂಧ ಅಣ್ಣ–ತಮ್ಮಂದಿರಿಗಿಂತ ಹೆಚ್ಚಾಗಿದೆ' ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೊಬ್ಬರ ಆಸ್ತಿ ಹೊಡೆಯುವ ದರ್ದು ನನಗಿಲ್ಲ. ದರ್ಶನ್ ಅವರು ಕ್ಲೀನ್‌ಚಿಟ್ ಕೊಟ್ಟರೂ, ಪೊಲೀಸರು ಅವರನ್ನೇನೂ ಬಿಟ್ಟು ವಿಚಾರಣೆ ನಡೆಸುವುದಿಲ್ಲ. ಎಲ್ಲರಿಗೂ ಕಾನೂನು ಒಂದೇ. ಪೊಲೀಸ್ ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿ. ಈ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಲಾಗುತ್ತಿದೆ. ನಾನು ಇಷ್ಟೊಂದು ಸಮಾಧಾನವಾಗಿ ಎಲ್ಲವನ್ನೂ ಏಕೆ ಹೇಳುತ್ತಿದ್ದೇನೆ ಎಂದರೆ, ಅದು ದರ್ಶನ್ ಅವರ ಮೇಲಿನ ಪ್ರೀತಿಯಿಂದಷ್ಟೇ. ಈ ವಿಚಾರದಲ್ಲಿ ಹೆಚ್ಚು ಮಾತನಾಡಿದರೆ ಪೊಲೀಸ್ ತನಿಖೆ ದಿಕ್ಕುತಪ್ಪಿಸಿದಂತಾಗುತ್ತದೆ. ನಾವು ಕಾನೂನಿಗಿಂತ ದೊಡ್ಡವರಲ್ಲ. ಆರೋಪ ಸಾಬೀತಾದ ಮೇಲಷ್ಟೇ ಅಪರಾಧಿ ಆಗುವುದು. ದರ್ಶನ್ ಅವರನ್ನು ದೂರ ಮಾಡಿ ನನಗೇನೂ ಲಾಭವಿಲ್ಲ. ಇಂತಹ ಕೀಳುಮಟ್ಟದವನು ನಾನಲ್ಲ. ದರ್ಶನ್ ಅವರಿಗೆ ಬೆಲೆ ಕೊಟ್ಟು ನಾನು ಮಾತನಾಡುತ್ತಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.