‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ನಿರ್ದೇಶಿಸಿರುವ ಮೊದಲ ತುಳು ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ‘ಬುಲ್‌ಡಾಗ್’ ಹೆಸರಿನ ಈ ಸಿನಿಮಾದಲ್ಲಿ ಖ್ಯಾತ ರಂಗಭೂಮಿ, ಸಿನಿಮಾ ನಟ ಅರವಿಂದ ಬೋಳಾರ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಲಂಚುಲಾಲ್ ಕೆ.ಎಸ್. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಭಿನ್ನವಾದ ಪಾತ್ರದಲ್ಲಿ ಅರವಿಂದ ಬೋಳಾರ್ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ‘ದಿಯಾ’ ಬಳಿಕ, ‘ಜೂನಿ’, ‘ಫಾರ್ ರಿಜಿಸ್ಟ್ರೇಷನ್’, ‘ಮತ್ಸ್ಯಗಂಧ’, ‘ಭುವನಂ ಗಗನಂ’, ‘ಕೊತ್ತಲವಾಡಿ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಪೃಥ್ವಿ ಸದ್ಯ ‘ಚೌಕಿದಾರ್’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿರುವ ‘ಅಮೆರಿಕ ಅಮೆರಿಕ-2’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ‘ದಿಯಾ’ ಸಿನಿಮಾ ನಿರ್ದೇಶಕರ ಜೊತೆಗೂ ಸಿನಿಮಾವೊಂದನ್ನು ಪೃಥ್ವಿ ಮಾಡಲಿದ್ದಾರೆ.
‘ಬುಲ್‌ಡಾಗ್’ ಸಿನಿಮಾವನ್ನು ತುಳುವಿನ ಜೊತೆಗೆ ಕನ್ನಡದಲ್ಲೂ ರಿಲೀಸ್ ಮಾಡುವ ಯೋಜನೆಯನ್ನು ಪೃಥ್ವಿ ಹಾಕಿಕೊಂಡಿದ್ದು, ಈ ಸಿನಿಮಾ ಮೂಲಕ ತಂಡವೊಂದನ್ನು ರಚಿಸಿಕೊಂಡು ಕನ್ನಡದಲ್ಲೂ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಅವರು ಯೋಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.