ADVERTISEMENT

ಯಶಸ್ಸು, ಸಮೃದ್ಧ ಬದುಕೂ ಮುಖ್ಯ: ‘ಫಾರ್‌ ರಿಜಿಸ್ಟ್ರೇಷನ್‌’ನ ಪೃಥ್ವಿ ಅಂಬಾರ್‌

ಶರತ್‌ ಹೆಗ್ಡೆ
Published 24 ಮಾರ್ಚ್ 2022, 19:30 IST
Last Updated 24 ಮಾರ್ಚ್ 2022, 19:30 IST
ಪೃಥ್ವಿ ಅಂಬಾರ್‌
ಪೃಥ್ವಿ ಅಂಬಾರ್‌   

ಕಾಲೇಜು ದಿನಗಳಲ್ಲಿ ನಿರೂಪಕನಾಗಿದ್ದ ಈ ಹುಡುಗ ಹೀರೋ ಆಗುವ ಕನಸು ಕಂಡವನಲ್ಲ. ಆದರೆ, ಈಗ ಬಹುಭಾಷಾ ಚಿತ್ರಗಳಲ್ಲಿ ಬ್ಯುಸಿ ನಾಯಕ. ಅವರ ಅಭಿನಯದ ‘ಶುಗರ್‌ಲೆಸ್‌’ ಬಿಡುಗಡೆಯ ಹಾದಿಯಲ್ಲಿದೆ. ‘ಫಾರ್‌ ರಿಜಿಸ್ಟ್ರೇಷನ್‌’ನ ಚಿತ್ರೀಕರಣ ನಡೆದಿದೆ. ಈ ಹೊತ್ತಿನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಜೊತೆ ಮಾತುಕತೆ.

***

ತುಳು ಚಿತ್ರ ‘ಬರ್ಕೆ’ಯಿಂದ ‘ಫಾರ್‌ ರಿಜಿಸ್ಟ್ರೇಷನ್‌’ವರೆಗಿನ ಸಿನಿಪಯಣ ನೆನಪಿಸುವುದಾದರೆ?

ADVERTISEMENT

-ಹೌದು ಎಲ್ಲವೂ ಅನಿರೀಕ್ಷಿತ. ಗುರುಕಿರಣ್‌ ಅವರ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದೆ. ಒಮ್ಮೆ ಅವರೇ ಸಿನಿಮಾಕ್ಕೆ ಪ್ರಯತ್ನಿಸುವಂತೆ ಪ್ರೋತ್ಸಾಹಿಸಿದರು. ಚಿತ್ರದಲ್ಲಿ ನಿರೂಪಕನ ಪಾತ್ರವೇ ಸಿಕ್ಕಿತು. ಆ ಬಳಿಕ ‘ದಿಯಾ’ ಚಿತ್ರಕ್ಕಾಗಿ ಆಡಿಷನ್‌ ನಡೆಯುತ್ತಿತ್ತು. ಸುಮ್ಮನೆ ಪ್ರಯತ್ನಿಸಿದೆ. ಆಯ್ಕೆಯೂ ನಡೆಯಿತು. ಈ ಮಧ್ಯೆ ಶಿಕ್ಷಣವೂ ಬೇಕಲ್ಲಾ. ಅದಕ್ಕಾಗಿ ಸಮೂಹ ಸಂವಹನ ವಿಷಯದಲ್ಲಿ ಪದವಿಯೂ ಆಯಿತು. ಕೆಲಕಾಲ ರೇಡಿಯೊ ಜಾಕಿ ಆಗಿದ್ದೆ. ಈಟಿವಿಯ ಡ್ಯಾನ್ಸ್‌ ರಿಯಾಲಿಟಿ ಷೋದಲ್ಲಿ ನೃತ್ಯ ಪ್ರದರ್ಶನದ ಮೂಲಕ ಗುರುತಿಸಿಕೊಂಡೆ. ಹಾಗೆ ನೋಡಿದರೆ ನಾನು ನೃತ್ಯ ನಿರ್ದೇಶಕನಾಗಬೇಕು ಅಂದುಕೊಂಡಿದ್ದವನು. ಈಗ ಇಲ್ಲಿಯವರೆಗೆ ಬಂದಿದ್ದೇನೆ ನೋಡಿ.

ಸಿನಿಮಾ ಅಥವಾ ಧಾರಾವಾಹಿ ಯಾವುದು ಇಷ್ಟ?

-ಧಾರಾವಾಹಿ ನಿರಂತರ ನಟನಾ ಕಲಿಕೆಯ ಶಾಲೆಯಿದ್ದಂತೆ. ಅಲ್ಲಿ ಕಲಿಕೆಗೆ ಸಾಕಷ್ಟು ಅವಕಾಶ ಇದೆ. ಈಗ ಸಿನಿಮಾಕ್ಕೆ ಬಂದಿದ್ದೇನೆ. ಇಲ್ಲಿಯೇ ಅವಕಾಶಗಳಿವೆ. ಹಾಗಾಗಿ ಸಿನಿಮಾದಲ್ಲೇ ಮುಂದುವರಿಯುತ್ತೇನೆ. ಇದೊಂದು ಆಸಕ್ತಿ ಮತ್ತು ವೃತ್ತಿ ಎಂದು ತುಂಬಾ ಹತ್ತಿರವಾಗಿಬಿಟ್ಟಿದೆ.

‘ಫಾರ್‌ ರಿಜಿಸ್ಟ್ರೇಷನ್‌’ನಲ್ಲಿ ಏನಿದೆ?

– ಎಷ್ಟೋ ವಿಷಯಗಳನ್ನು ನಾವು ಮನಸ್ಸಿನಲ್ಲಿ ನೋಂದಣಿ (ರಿಜಿಸ್ಟರ್‌) ಮಾಡಿಕೊಳ್ಳುವುದೇ ಇಲ್ಲ. ಸಂಬಂಧ, ಪ್ರೀತಿ, ಮೌಲ್ಯ, ಘಟನೆ, ವ್ಯಕ್ತಿ... ಹೀಗೆ ತುಂಬಾ ಇವೆ. ಅಂಥ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಇದೊಂದು ಕುಟುಂಬ ಸಮೇತ ನೋಡಬೇಕಾದ ಮನರಂಜನಾ ಚಿತ್ರ. ಮುಂದಿನದ್ದು ಚಿತ್ರದಲ್ಲೇ ಗೊತ್ತಾಗಲಿದೆ. ಒಳ್ಳೆಯ ತಂಡವಿದು. ಬೇರೆ ಬೇರೆ ಲೊಕೇಷನ್‌ಗಳಲ್ಲಿ ಚಿತ್ರೀಕರಣ ನಡೆದಿದೆ. ಬಹಳಷ್ಟು ಮಂದಿ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ.

ನಿರ್ದೇಶನದ ಕನಸಿದೆಯೇ?

– ಹೌದು, ಆದರೆ ಅದಕ್ಕೆ ನಾನಿನ್ನೂ ಕಲಿಯಬೇಕಿದೆ. ಇನ್ನೊಂದಿಷ್ಟು ವರ್ಷ ಹೋಗಬೇಕು. ಮುಂದೆ ನೋಡೋಣ. ಸದ್ಯ ಈಗ ಕೈಲಿರುವ ಕೆಲಸಗಳನ್ನು ಮುಗಿಸಬೇಕು.

ಕುಟುಂಬ ಜೀವನ ಹೇಗಿದೆ?

– ತುಂಬಾ ಚೆನ್ನಾಗಿದೆ. ಇತ್ತೀಚೆಗೆ ಮಗುವಾಗಿದೆ. ಪತ್ನಿಯೂ ನನಗೆ ಕಲಾ ಬದುಕಿನಲ್ಲೇ (ಡ್ಯಾನ್ಸ್‌ ರಿಯಾಲಿಟಿ ಷೋದಲ್ಲಿ) ಸಿಕ್ಕಿದಳು. ಅವಳ ಬೆಂಬಲವೂ ತುಂಬಾ ಇದೆ. ಕೆಲಸದ ಜೊತೆಗೆ ಕುಟುಂಬಕ್ಕೂ ಹೆಚ್ಚು ಸಮಯ ಕೊಡಬೇಕಾದ ಜವಾಬ್ದಾರಿ ಇದೆ. ಸದ್ಯ ಕೆಲಸದ ಒತ್ತಡವೂ ಇರುವುದರಿಂದ ಸಮತೋಲನ ಸಾಧಿಸಬೇಕು ಅಷ್ಟೆ.

ನಿಮ್ಮ ಅಭಿರುಚಿ ಆಸಕ್ತಿಗಳು?

-ಏನೇ ಮಾಡಿದರೂ ನಾನು ಕೃಷಿ ಕ್ಷೇತ್ರಕ್ಕೆ ಹೋಗಬೇಕು. ತಂದೆಯವರು ಮೂಲತಃ ಕೃಷಿಕರು. ಪೌಲ್ಟ್ರಿ ಫಾರ್ಮಿಂಗ್‌ ಮೇಲೂ ಆಸಕ್ತಿ ಇದೆ. ಅಲ್ಲೊಂದಿಷ್ಟು ಕೆಲಸ ಮಾಡಬೇಕು ಎಂಬ ಆಸೆ ಇದೆ. ಅಲ್ಲಿಯೂ ಕಲಿಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.