ADVERTISEMENT

ಹೊಸಪೇಟೆ: ನೋವಿಗೆ ಮಿಡಿದ ‘ದೊಡ್ಮನೆ ಹುಡ್ಗ’, ಪೋರನ ಚಿಕಿತ್ಸೆಗೆ ನೆರವಾದ ನಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಫೆಬ್ರುವರಿ 2020, 19:30 IST
Last Updated 13 ಫೆಬ್ರುವರಿ 2020, 19:30 IST
ಬೆಂಗಳೂರಿಗೆ ಆದರ್ಶನನ್ನು ಕರೆಸಿಕೊಂಡು ಧೈರ್ಯ ತುಂಬಿದ ನಟ ಪುನೀತ್‌ ರಾಜಕುಮಾರ
ಬೆಂಗಳೂರಿಗೆ ಆದರ್ಶನನ್ನು ಕರೆಸಿಕೊಂಡು ಧೈರ್ಯ ತುಂಬಿದ ನಟ ಪುನೀತ್‌ ರಾಜಕುಮಾರ   

ಹೊಸಪೇಟೆ: ವಿಚಿತ್ರ ಕಾಯಿಲೆಯಿಂದ ನರಳಾಡುತ್ತಿದ್ದ ಅಭಿಮಾನಿಯ ನೋವಿಗೆ ಸ್ಪಂದಿಸಿ, ಅವನ ಚಿಕಿತ್ಸೆಗೆ ನೆರವಾಗುವ ಮೂಲಕ ನಟ ಪುನೀತ್‌ ರಾಜಕುಮಾರ ಅವರು ತಾನು ನಿಜವಾಗಲೂ ‘ದೊಡ್ಮನೆ ಹುಡ್ಗ’ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಲ್ಲಿನ ತಳವಾರಕೇರಿ ನಿವಾಸಿ, ಆಟೊ ಚಾಲಕ ಹನುಮಂತ ಹಾಗೂ ರೇಖಾ ದಂಪತಿಯ ಮಗ ಆದರ್ಶ ಹುಟ್ಟಿದಾಗಿನಿಂದ ವಿಚಿತ್ರ ಕಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾನೆ. ವಯಸ್ಸು ಈಗ 17 ವರ್ಷವಾದರೂ ಆದರ್ಶ ಚಿಕ್ಕ ಹುಡುಗನಂತೆ ಕಾಣುತ್ತಾನೆ. ಅವನ ಬೆಳವಣಿಗೆ ಕುಂಠಿತಗೊಂಡಿರುವುದೇ ಅದಕ್ಕೆ ಪ್ರಮುಖ ಕಾರಣ.

ದೇಹದಲ್ಲಿ ಮಾಂಸಖಂಡಗಳ ಬೆಳವಣಿಗೆ ಸಂಪೂರ್ಣವಾಗಿ ನಿಂತಿರುವು ದರಿಂದ ಆತನಿಗೆ ಎದ್ದು ನಿಲ್ಲಲು, ಕೂರಲು ಆಗುವುದಿಲ್ಲ. ಪೋಷಕರು ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿ ತೋರಿಸಿ ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಆದರ್ಶ, ಸದಾ ಮನೆಯಲ್ಲೇ ಇರುತ್ತಾನೆ.

ADVERTISEMENT

ಆದರೆ, ಆತನಿಗೆ ಪುನೀತ್‌ ಹಾಗೂ ಅವರ ನಟನೆಯ ಚಿತ್ರಗಳೆಂದರೆ ಬಹಳ ಅಚ್ಚುಮೆಚ್ಚು. ಟಿ.ವಿ ಚಾನೆಲ್‌ಗಳಲ್ಲಿ ಪುನೀತ್‌ ಅವರ ಚಿತ್ರ, ಹಾಡುಗಳು ಬಂದರೆ ತಪ್ಪದೇ ನೋಡುತ್ತಾನೆ. ಸಿನಿಮಾ ಮಂದಿರಕ್ಕೆ ಚಿತ್ರ ಬಂದರೆ, ತಂದೆಗೆ ಹಠಮಾಡಿ ಮೊದಲ ದಿನವೇ ಅಲ್ಲಿಗೆ ಹೋಗಿ ನೋಡಿಕೊಂಡು ಬರುತ್ತಾನೆ. ಅಷ್ಟರಮಟ್ಟಿಗೆ ಪುನೀತ್‌ ಮೇಲೆ ಅಭಿಮಾನ ಬೆಳೆಸಿಕೊಂಡಿದ್ದಾನೆ.

ಇಂತಹ ಅಭಿಮಾನಿಯ ವಿಷಯ ಇತ್ತೀಚೆಗೆ ಪುನೀತ್‌ ಅವರ ಕಿವಿಗೆ ಬಿದ್ದಿದೆ. ಸ್ವಲ್ಪವೂ ತಡಮಾಡದೆ ಪುನೀತ್‌ ಅವರು ಬೆಂಗಳೂರಿನಿಂದ ಐಷಾರಾಮಿ ಕಾರನ್ನು ಮಂಗಳವಾರ (ಫೆ.11) ಆದರ್ಶ ಅವರ ಮನೆಗೆ ಕಳುಹಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹೋಟೆಲೊಂದ ರಲ್ಲಿ ಇರಿಸಿ, ಸ್ವತಃ ಪುನೀತ್‌ ಆ ಹುಡುಗನನ್ನು ಭೇಟಿ ಮಾಡಿ ಮನೆ ಮಂದಿಗೆಲ್ಲ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅಲ್ಲದೇ ‘ಸ್ಪರ್ಶ’ ಆಸ್ಪತ್ರೆಯ ವೈದ್ಯರೊಂದಿಗೆ ಮಾತುಕತೆ ನಡೆಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಖರ್ಚು ವೆಚ್ಚ ಭರಿಸುವ ಭರವಸೆ ಕೊಟ್ಟಿದ್ದಾರೆ.

‘ಪುನೀತ್‌ ಅವರೇ ವಿಷಯ ತಿಳಿದು ಮಗನಿಗೆ ಚಿಕಿತ್ಸೆ ಕೊಡಿಸುವ ಏರ್ಪಾಡು ಮಾಡಿಸಿದ್ದಾರೆ. ನಾವಂತೂ ಎಲ್ಲ ಕಡೆ ತೋರಿಸಿ ಸುಮ್ಮನಾಗಿದ್ದೇವೆ. ಇದು ಕೊನೆಯ ಆಸೆ. ಮಗ ಸ್ವತಃ ಅವನ ಕಾಲ ಮೇಲೆ ನಿಲ್ಲುವುದಕ್ಕೆ ಶಕ್ತಿ ಬಂದರೆ ಸಾಕು. ದೇವರಂತೆ ಬಂದು ನೆರವಿನ ಹಸ್ತ ಚಾಚಿರುವ ಪುನೀತ್‌ ಅವರಿಗೂ ದೇವರು ಆಯುಷ್ಯ, ಆರೋಗ್ಯ ಕರುಣಿಸಲಿ’ ಎಂದು ಆದರ್ಶನ ತಂದೆ ಹನುಮಂತ ಪ್ರತಿಕ್ರಿಯಿಸಿದ್ದಾರೆ.

*
ಪುನೀತ್‌ ಅವರು ಚಿತ್ರಗಳಲ್ಲಷ್ಟೇ ಹೀರೋ ಅಲ್ಲ. ನಿಜ ಜೀವನದಲ್ಲೂ ದೊಡ್ಡ ಹೀರೋ. ಇಂತಹವರು ಬಹಳ ಅಪರೂಪ.
–ಹನುಮಂತ, ಆದರ್ಶನ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.