ADVERTISEMENT

ಯುರೋಪ್‌ಗೆ ಹೊರಟ ಯುವರತ್ನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:30 IST
Last Updated 11 ಫೆಬ್ರುವರಿ 2020, 19:30 IST
ಪುನೀತ್‌ ರಾಜ್‌ಕುಮಾರ್
ಪುನೀತ್‌ ರಾಜ್‌ಕುಮಾರ್   

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಗಾಂಧಿನಗರದಲ್ಲಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರ. ‘ರಾಜಕುಮಾರ’ ಚಿತ್ರ ನಿರ್ದೇಶಿಸಿದ್ದ ಸಂತೋಷ್‌ ಆನಂದರಾಮ್‌ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳಿನ ಶಯೇಷಾ ಇದರ ನಾಯಕಿ. ಕನ್ನಡದಲ್ಲಿ ಇದು ಅವರಿಗೆ ಮೊದಲ ಚಿತ್ರವೂ ಹೌದು.

ಈ ಚಿತ್ರದ ಮಾತಿನ ಭಾಗ ಹಾಗೂ ಮೂರು ಹಾಡುಗಳ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಉಳಿದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸಿದೆ. ಫೆ. 24ರಿಂದ ಪುನೀತ್‌ ಮತ್ತು ಶಯೇಷಾ ಅವರ ಡುಯೇಟ್‌ ಸಾಂಗ್‌ನ ಚಿತ್ರೀಕರಣಕ್ಕಾಗಿ ಯುರೋಪ್‌ ತೆರೆಳಲು ಚಿತ್ರತಂಡ ನಿರ್ಧರಿಸಿದೆ. ನಾಯಕನ ಇಂಟ್ರಡಕ್ಷನ್‌ ಸಾಂಗ್‌ ಅನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗುತ್ತದೆಯಂತೆ.

‘ಯುರೋಪ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದೇವೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್‌ ತಿಳಿಸಲಿದೆ. ಇದರ ಬಗ್ಗೆ ನಾನೇನು ಹೇಳಲು ಆಗುವುದಿಲ್ಲ’ ಎನ್ನುತ್ತಾರೆ ಸಂತೋಷ್‌ ಆನಂದರಾಮ್‌.

ADVERTISEMENT

ಈಗ ಶೈಕ್ಷಣಿಕ ರಂಗದಲ್ಲಿ ಹಣ ಮಾಡುವುದು ದಂಧೆಯಾಗಿದೆ. ಈ ಮಾಫಿಯಾದ ಸುತ್ತವೇ ‘ಯುವರತ್ನ’ ಚಿತ್ರದ ಕಥೆ ಹೆಣೆಯಲಾಗಿದೆ. ಸಮಾಜದ ಮೇಲೆ ಈ ದಂಧೆ ಬೀರಿರುವ ದುಷ್ಪರಿಣಾಮ ಮತ್ತು ಅದರಿಂದ ಮಕ್ಕಳ ಭವಿಷ್ಯದ ಮೇಲೆ ಎದುರಾಗಿರುವ ಆಪತ್ತಿನ ಕುರಿತು ಸಿನಿಮಾ ಮಾತನಾಡಲಿದೆಯಂತೆ.

‘ಡಾಲಿ’ ಖ್ಯಾತಿಯ ಧನಂಜಯ್‌ ಅವರದು ಚಿತ್ರದಲ್ಲಿ ಆ್ಯಂಟನಿ ಜೋಸೆಫ್‌ ಪಾತ್ರ. ಪ್ರಸಕ್ತ ಖಾಸಗಿ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಪಾತ್ರವದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಎಸ್. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ. ವಿಜಯ್‌ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಪ್ರಕಾಶ್ ರಾಜ್‌, ವಸಿಷ್ಠ ಸಿಂಹ, ದಿಗಂತ್‌, ನಟಿ ಸೋನು ಗೌಡ ತಾರಾಗಣದಲ್ಲಿದ್ದಾರೆ.

ಕಳೆದ ವರ್ಷವೇ ಈ ಚಿತ್ರ ತೆರೆ ಕಾಣಬೇಕಿತ್ತು. ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಿಡುಗಡೆಗೆ ವಿಳಂಬವಾಗಿದೆ. ಬೇಸಿಗೆ ರಜೆ ವೇಳೆಗೆ ತೆರೆಕಾಣುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.