ADVERTISEMENT

ಬಿಡುಗಡೆಗೆ ಸಜ್ಜಾದ ಪುರ್‌ಸೋತ್‌ರಾಮ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 10:46 IST
Last Updated 16 ಅಕ್ಟೋಬರ್ 2020, 10:46 IST
ಪುರ್‌ಸೋತ್‌ರಾಮ ಚಿತ್ರದ ಪೋಸ್ಟರ್‌
ಪುರ್‌ಸೋತ್‌ರಾಮ ಚಿತ್ರದ ಪೋಸ್ಟರ್‌   

ಕೋವಿಡ್‌ ಲಾಕ್‌ಡೌನ್‌ ತೆರೆವಾದ ನಂತರ ಅನ್‌ಲಾಕ್‌ 5.0ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಶ್ರೇಯ ಗಿಟ್ಟಿಸಲು ರೆಡಿಯಾಗುತ್ತಿದೆ ‘ಪುರ್‌ಸೋತ್‌ರಾಮ’ ಚಿತ್ರ. ಅ.23ರಂದು ಈ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ಚಿತ್ರದ ನಾಯಕಿ ಮತ್ತು ನಿರ್ಮಾಪಕಿ ಮಾನಸ.

ಈ ಚಿತ್ರವನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿತ್ತು. ಅಷ್ಟರಲ್ಲಿ ಕೊರೊನಾ ಲಾಕ್‌ಡೌನ್‌ ಘೋಷಣೆಯಾಗಿ, ಚಿತ್ರ ತೆರೆಕಾಣಲು ಸಾಧ್ಯವಾಗಿರಲಿಲ್ಲ. ಇದೇ 23ರಂದು ಚಿತ್ರ ತೆರೆಗೆ ಬರುತ್ತಿರುವ ಸಂಗತಿಯನ್ನು ನಟ ರವಿಶಂಕರ್‌ಗೌಡ ಕೂಡ ಖಚಿತಪಡಿಸಿದ್ದಾರೆ.

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ ರಿತಿಕ್‌ ಸರು. ಇವರ ಜತೆಗೆ ಕಾಮಿಡಿಯ ಕಮಾಲ್‌ ಮಾಡಿರುವುದು ರವಿಶಂಕರ್ ಗೌಡ, ಕುರಿಪ್ರತಾಪ್ ಹಾಗೂ ಶಿವರಾಜ್ ಕೆ.ಆರ್. ಪೇಟೆ ಅವರು. ಈ ಮೂವರು ಹಾಸ್ಯನಟರ ಕಾಂಬಿನೇಷನ್‌ ಪ್ರೇಕ್ಷಕರಿಗೆ ಹಾಸ್ಯ ರಸಾಯನ ಉಣಬಡಿಸುವ ನಿರೀಕ್ಷೆ ಮೂಡಿಸಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ಮಾನಸ ನಾಯಕಿಯಾಗಿ ಅಭಿನಯಿಸಿದ್ದಾರೆ.

ADVERTISEMENT

ಕಡಿಮೆ ಸಂಬಳಕ್ಕೆ ಏಕೆ ದುಡಿಯಬೇಕೆಂಬ ಮನಸ್ಥಿತಿಯಮೂವರು ಸ್ನೇಹಿತರು, ಬದುಕಿನ ಬಗ್ಗೆ ನಕರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಾ ಅಮೂಲ್ಯ ಸಮಯ ಹರಣ ಮಾಡುತ್ತಿರುತ್ತಾರೆ. ತುಂಬಾಪುರುಸೊತ್ತಾಗಿರುವ ಇವರ ಬದುಕಿನಲ್ಲಿ ಏನೆಲ್ಲಾ ಸಂಭವಿಸಲಿದೆ ಎನ್ನುವುದನ್ನು ನಿರ್ದೇಶಕ ಸರು ಹಾಸ್ಯಮಯವಾಗಿ ಈ ಚಿತ್ರದಲ್ಲಿ ತೋರಿಸಿದ್ದಾರಂತೆ.

ಲಾಕ್‌ಡೌನ್‌ಗೂ ಪೂರ್ವದಲ್ಲಿ ಈ ಚಿತ್ರದ ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಸಿದ್ದರು. ನಟ ಮನುರಂಜನ್‌ ರವಿಚಂದ್ರನ್‌ ಕೂಡ ಚಿತ್ರತಂಡವನ್ನು ಬೆನ್ನುತಟ್ಟಿದ್ದರು.

ತಾರಾಗಣದಲ್ಲಿ ಹಿರಿಯ ನಟ ಬ್ಯಾಂಕ್‌ ಜನಾರ್ದನ್‌, ಕುರಿ ಪ್ರತಾಪ್, ಸಹನಾ, ಅನುಷಾ ಪಕಾಲಿ, ಆರ್.ಟಿ. ರಮಾ ಇದ್ದಾರೆ. ಕಿರಣ್ ಕುಮಾರ್ ಛಾಯಾಗ್ರಹಣ ಅವರದ್ದು. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಶುದ್ದೋ ರಾಯ್ ಸಂಗೀತ ನೀಡಿದ್ದಾರೆ.ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಪ್ರಭುದೇವ್ ಅವರದ್ದು.ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ರಾಜ್‌ಕಿಶೋರ್, ಮದನ್ - ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.