ಅಲ್ಲು ಅರ್ಜುನ್– ರಶ್ಮಿಕಾ ಮಂದಣ್ಣ ನಟನೆಯ ಚಿತ್ರ ‘ಪುಷ್ಪ’ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಆಗಸ್ಟ್ 13ಕ್ಕೆ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ಬಿಡುಗಡೆ ದಿನಾಂಕವನ್ನು ಡಿಸೆಂಬರ್ 17ಕ್ಕೆ ಚಿತ್ರತಂಡ ನಿಗದಿಪಡಿಸಿದೆ. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ನ. 6ರಿಂದ ಆರಂಭವಾಗಿತ್ತು. ಇದೀಗ ಮತ್ತೆ ಕೋವಿಡ್ ಅಲೆ ಆವರಿಸುತ್ತಿರುವುದೂ ಚಿತ್ರತಂಡಕ್ಕೆ ಆತಂಕ ಸೃಷ್ಟಿಸಿದೆ. ಚಿತ್ರದ ಕೆಲವು ಭಾಗಗಳನ್ನು ಕೇರಳದ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಇನ್ನೂ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಪುಷ್ಪದ ಟ್ರೇಲರ್ ಯುಟ್ಯೂಬ್‌ನಲ್ಲಿ ಟ್ರೆಂಡ್ ಹುಟ್ಟುಹಾಕಿದೆ.
ಸುಕುಮಾರ್ ಅವರು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು.ರಕ್ತಚಂದನ ಕಳ್ಳಸಾಗಣೆಗಾರರ ಸುತ್ತ ಕಥೆ ಹೆಣೆಯಲಾಗಿದೆ. ಇಲ್ಲಿ ಚಿತ್ರದ ಪಾತ್ರಕ್ಕಾಗಿ ಅಲ್ಲುಅರ್ಜುನ್ ಸಾಕಷ್ಟು ದೈಹಿಕ ಕಸರತ್ತು ನಡೆಸಿದ್ದಾರೆ.
ತಿರುಮಲ ಬೆಟ್ಟ ವ್ಯಾಪ್ತಿಯ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಥೆ ನಡೆಯುವಂತೆ ಚಿತ್ರಿಸಲಾಗಿದೆ. ಅಲ್ಲು ಅವರದ್ದು ಚಿತ್ರದಲ್ಲಿ ಲಾರಿ ಚಾಲಕನ ಪಾತ್ರ. ರಶ್ಮಿಕಾ ಮಂದಣ್ಣ ಇಲ್ಲಿ ಚಿತ್ತೂರು ಹುಡುಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ಚಿತ್ತೂರು ಪ್ರದೇಶದ ಭಾಷೆಯನ್ನೂ ಕಲಿತಿದ್ದಾರೆ. ಖ್ಯಾತನಟ ಮಾಧವನ್ ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಿಸುತ್ತಿದೆ.ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.