
ದರ್ಶನ್, ರಚನಾ ರೈ ನಟನೆಯ ‘ಡೆವಿಲ್’ ಚಿತ್ರ ಡಿ.11ರಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಸಿನಿಜಗತ್ತಿನಲ್ಲಿನ ಕನಸುಗಳ ಕುರಿತು ರಚನಾ ರೈ ಮಾತನಾಡಿದ್ದಾರೆ.
ನಿಮ್ಮ ಪಾತ್ರ...
ಮನೆ ಮಗಳ ಪಾತ್ರ. ಎಲ್ಲರಿಗೂ ಇಷ್ಟವಾಗುವ ಪಾತ್ರ. ಬೋಲ್ಡ್ ಕ್ಯಾರೆಕ್ಟರ್. ನಾಯಕನ ಬೆಂಬಲಕ್ಕೆ ನಿಲ್ಲುವ ರೀತಿ ಇರುತ್ತದೆ. ಪ್ರೇಮಕಥೆಯೂ ಬರುತ್ತದೆ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ನನ್ನದು ಅಂಥಲ್ಲ, ಯಾವ ಪಾತ್ರದ ಕುರಿತೂ ಇಲ್ಲಿತನಕ ಹೆಚ್ಚು ಮಾಹಿತಿ ಹೊರಹಾಕಿಲ್ಲ. ಹೆಚ್ಚು ಹೇಳಿದರೆ ಕಥೆ ಬಿಟ್ಟುಕೊಟ್ಟಂತೆ ಆಗುತ್ತದೆ ಎಂದು ಪಾತ್ರ ಪರಿಚಯಕ್ಕೆ ನಿರ್ದೇಶಕರು ಒಪ್ಪಿಗೆ ನೀಡಿಲ್ಲ.
ನಾಯಕಿ ಪಾತ್ರ ದರ್ಶನ್ ಅವರ ಹಿಂದಿನ ಸಿನಿಮಾಗಳಂತೆ ಇದೆಯಾ? ಅಥವಾ ಪ್ರಾಮುಖ್ಯ ಇದೆಯಾ?
ಇದು ಮಾಸ್, ಆ್ಯಕ್ಷನ್ ಸಿನಿಮಾ. ಇದರ ನಿರ್ದೇಶಕ ಪ್ರಕಾಶ್ ವೀರ್. ಅವರ ಹಿಂದಿನ ಸಿನಿಮಾಗಳಲ್ಲಿಯೂ ನಾಯಕಿ ಪಾತ್ರಕ್ಕೆ ಪ್ರಾಮುಖ್ಯ ಇತ್ತು. ಅದೇ ರೀತಿ ಇಲ್ಲಿಯೂ ಇದೆ. ನಾನು ಆಡಿಷನ್‌ನಲ್ಲಿ ಆಯ್ಕೆಯಾಗಿದ್ದು. ನನ್ನ ನಟನೆ ನೋಡಿ, ಪಾತ್ರಕ್ಕೆ ಸೂಕ್ತ ಎನ್ನಿಸಿ ಆಯ್ಕೆ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಈ ಪಾತ್ರ ಸಿನಿಮಾದಲ್ಲಿ ಮಹತ್ವದ್ದು.
ನಾಯಕಿಯಾಗಿ ಮೊದಲನೆ ಸಿನಿಮಾವೇ?
ಇಲ್ಲ, ಇದು ಎರಡನೆ ಸಿನಿಮಾ. ಈ ಮೊದಲು ತುಳುವಿನಲ್ಲಿ ಒಂದು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದೆ. ಕನ್ನಡದಲ್ಲಿ ಇದೇ ಮೊದಲ ಸಿನಿಮಾ.
ರಂಗಭೂಮಿ, ನಟನೆ ಹಿನ್ನೆಲೆ ಏನಾದರೂ ಇತ್ತಾ?
ಖಂಡಿತ ಇಲ್ಲ. ನಾನು ಓದಿದ್ದು ಪತ್ರಿಕೋದ್ಯಮ. ವೃತ್ತಿಯಿಂದ ಬರಹಗಾರ್ತಿ. ನನ್ನ ಪುಸ್ತಕ ಕೂಡ ಪ್ರಕಟಗೊಂಡಿದೆ. ಅದಕ್ಕೂ ಮೊದಲು ಎಲ್ಲಿಯೂ ನಟಿಸಿರಲಿಲ್ಲ. ಪ್ರಯತ್ನಿಸೋಣ ಎಂದು ಬಂದೆ. ಪ್ರಯತ್ನ ಯಶಸ್ವಿಯಾಯಿತು. ಮೊದಲ ಸಿನಿಮಾದಲ್ಲಿಯೇ ದೊಡ್ಡ ಸ್ಟಾರ್ ನಟನ ಜತೆ ಅಭಿನಯಿಸುವ ಅವಕಾಶ ಲಭಿಸಿತು.
ಮೊದಲ ಸಿನಿಮಾದಲ್ಲಿಯೇ ದರ್ಶನ್‌ರಂಥ ನಾಯಕನ ಜತೆ ನಟನೆ ಅನುಭವ ಹೇಗಿತ್ತು?
ಪ್ರಾರಂಭದಲ್ಲಿ ಭಯವಿತ್ತು. ಆದರೆ ದರ್ಶನ್ ಎಲ್ಲಿಯೂ ಸ್ಟಾರ್ ನಟ ಎಂಬಂತೆ ನಡೆದುಕೊಳ್ಳಲಿಲ್ಲ. ನಟನೆ ಮತ್ತು ಸಂಭಾಷಣೆ ಹೇಳುವ ಕುರಿತು ಸಾಕಷ್ಟು ಹೇಳಿಕೊಟ್ಟರು. ಸಿನಿಮಾ ತಾಂತ್ರಿಕ ಜ್ಞಾನ ನನಗೆ ಕಡಿಮೆ ಇತ್ತು. ಸೆಟ್‌ನಲ್ಲಿ ಅವರು ಅದನ್ನು ತಿಳಿಸಿಕೊಟ್ಟರು. ಇದೊಂದು ಅದ್ಭುತ ಅನುಭವ ಮತ್ತು ಕಲಿಕೆ.
ನಿಮ್ಮ ಮುಂದಿನ ಯೋಜನೆಗಳು...
ಕನ್ನಡದಲ್ಲಿ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿರುವೆ. ಸದ್ಯದಲ್ಲಿಯೇ ಘೋಷಣೆಯಾಗುತ್ತದೆ. ಬೇರೆ ಭಾಷೆ ಸಿನಿಮಾ ಅವಕಾಶಗಳು ಬಂದಿವೆ. ಎಲ್ಲವೂ ಹಂತಹಂತವಾಗಿ ಘೋಷಣೆಯಾಗಲಿವೆ.
ಚಿತ್ರೋದ್ಯಮದಲ್ಲಿ ನಿಮ್ಮ ಮುಂದಿನ ಕನಸು, ಗುರಿ?
ಏನೂ ಅಂದುಕೊಳ್ಳದೇ ಇಲ್ಲಿಗೆ ಬಂದವಳು. ಪ್ರಾರಂಭದಲ್ಲಿಯೇ ಉತ್ತಮ ಅವಕಾಶ ಸಿಕ್ಕಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಇನ್ನೂ ಉತ್ತಮ ಪಾತ್ರಗಳನ್ನು ಮಾಡಬೇಕು. ಮಾಡುವ ಪಾತ್ರಗಳಿಗೆ ನ್ಯಾಯ ಒದಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.