ADVERTISEMENT

ಸಿನಿಮಾ ಸುಲಭವಲ್ಲ: ವಿನೋದ್‌ ‘ರಗಡ್‌’ ಮಾತು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:00 IST
Last Updated 25 ಮಾರ್ಚ್ 2019, 20:00 IST
ವಿನೋದ್‌ ಪ್ರಭಾಕರ್‌
ವಿನೋದ್‌ ಪ್ರಭಾಕರ್‌   

‘ಸಿನಿಮಾ ಮಾಡುವುದು ಅಂದ್ರೆ ಮಕ್ಕಳಾಟ ಅಲ್ಲ. ಪ್ರತಿಭೆ ಇದ್ದರೂ ಇಲ್ಲಿ ಬೇರೂರುವುದೂ ಕಷ್ಟ...’ ಹೀಗೆಂದವರು ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳ ಚಿತ್ರೋದ್ಯಮದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಟೈಗರ್‌ ಪ್ರಭಾಕರ್‌ ಅವರ ಪುತ್ರ ವಿನೋದ್‌ ಪ್ರಭಾಕರ್‌.

ವಿನೋದ್‌ ಅಭಿನಯದ ‘ರಗಡ್‌’ ಸಿನಿಮಾ ಈ ಮಾಸಾಂತ್ಯದಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಈಚೆಗೆ ಕಲಾವಿದರ ಸಂಘದ ಸಭಾಂಗಣದಲ್ಲಿ ರಗಡ್‌ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಬಿಡುಗಡೆ ಸಮಾರಂಭ ಆಯೋಜನೆಯಾಗಿತ್ತು. ವಿನೋದ್‌ ಅವರ ಅಭಿಮಾನಿಗಳಿಂದ ತುಂಬಿದ್ದ ಸಭಾಂಗಣದಲ್ಲಿ, ವಿನೋದ್‌ ಆಡಿದ್ದ ಈ ಮಾತುಗಳು ಅವರ ಹತಾಷೆಯನ್ನು ಬಿಂಬಿಸುವಂತಿದ್ದವು.

‘ಫಿಲ್ಮ್‌ ಇಂಡಸ್ಟ್ರಿ ಬೇಡ, ಬೇರೇನಾದರೂ ಕೆಲಸ ನೋಡಿಕೋ ಎಂದು ನನಗೆ ಅಪ್ಪ ಹಲವು ಬಾರಿ ಹೇಳಿದ್ದರು. ಯಾಕೆ ಎಂಬುದು ಈಚೆಗೆ ಅರ್ಥವಾಗಲು ಆರಂಭವಾಗಿದೆ. ‘ಟೈಸನ್‌’ನಂಥ ಯಶಸ್ವಿ ಸಿನಿಮಾ ಕೊಟ್ಟ ನಂತರವೂ ನನಗೆ ಉದ್ದಿಮೆಯಲ್ಲಿ ಅವಕಾಶಗಳು ಲಭಿಸಲಿಲ್ಲ. ಕಳೆದ 15 ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿದ್ದು, ತುಂಬ ಕಷ್ಟ ಅನುಭವಿಸಿದ್ದೇನೆ’ ಎಂದು ನೋವು ತೋಡಿಕೊಂಡರು.

ADVERTISEMENT

ವಿನೋದ್‌ ಇನ್ನೂ ಏನೋ ಹೇಳುತ್ತಾರೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿತ್ತು. ‘ಹೇಳುವುದು ಬಹಳಷ್ಟಿದೆ. ಸಿನಿಮಾ (ರಗಡ್‌) ಬಿಡುಗಡೆ ಆದ ನಂತರ ಮಾತನಾಡುತ್ತೇನೆ’ ಎಂದಷ್ಟೇ ಹೇಳಿ ವಿನೋದ್‌ ಒಮ್ಮಲೇ ಮಾತಿಗೆ ವಿರಾಮ ಹಾಕಿದರು.

‘ಇದು ಪೂರ್ಣಪ್ರಮಾಣದ ಆ್ಯಕ್ಷನ್‌ ಚಿತ್ರ. ವಿನೋದ್‌ ಪ್ರಭಾಕರ್‌ ಅವರು ಈ ಸಿನಿಮಾಗಾಗಿ ಶ್ರಮಪಟ್ಟು ‘8 ಪ್ಯಾಕ್‌’ ಮಾಡಿಕೊಂಡಿದ್ದಾರೆ. ಮಾರ್ಚ್‌ 29ರಂದು ಈ ಸಿನಿಮಾ ತೆರೆಗೆ ಬರಲಿದೆ’ ಎಂದರು ರಗಡ್‌ ನಿರ್ದೇಶಕ ಮಹೇಶ್‌ ಗೌಡ.

‘ಇದು ನನ್ನ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ ತಪ್ಪುಗಳಾಗಿದ್ದರೆ ನೇರವಾಗಿ ಟೀಕೆ ಮಾಡಿಬಿಡಿ. ಮುಂದೆ ತಪ್ಪುಗಳಾಗದಂತೆ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುವ ಮಾತು ಸೇರಿಸಿದರು ನಿರ್ದೇಶಕರು.

ಈ ಮಾತಿಗೆ ಪ್ರತಿಕ್ರಿಯೆ ನೀಡಿದ ವಿನೋದ್, ‘ನಿಮ್ಮ ಮೊದಲ ಸಿನಿಮಾ ಎಂಬ ಭಾವನೆ ಎಲ್ಲೂ ಮೂಡುವುದಿಲ್ಲ. ಚಿತ್ರ ಅಷ್ಟು ಸೊಗಸಾಗಿ ಮೂಡಿಬಂದಿದೆ. ಅದೂ ಅಲ್ಲದೆ ಸಿನಿಮಾದಲ್ಲಿ ತಪ್ಪು ಮಾಡಲು ಅವಕಾಶ ಇಲ್ಲ. ಬಿಡುಗಡೆ ಆದ ನಂತರ ಸಿನಿಮಾ ಒಂದು ದಾಖಲೆಯಾಗಿ ಉಳಿಯುತ್ತದೆ. ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಇರುವುದಿಲ್ಲ’ ಎನ್ನುವ ಮೂಲಕ, ನಿರ್ದೇಶಕರಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ನಡೆಸಿದರು.‌

ಚೈತ್ರಾ ರೆಡ್ಡಿ ಈ ಚಿತ್ರದ ನಾಯಕಿ. ಓಂಪ್ರಕಾಶ್‌ ರಾವ್‌, ರಾಜೇಶ್‌ ನಟರಂಗ, ದೀ‍ಪಕ್‌ ಶೆಟ್ಟಿ, ಡ್ಯಾನಿ ಕುಟ್ಟಪ್ಪ, ಕೃಷ್ಣ ಅಡಿಗ, ಮಾಲತಿ ದೇಶ್‌ಪಾಂಡೆ, ಥ್ರಿಲ್ಲರ್‌ ಮಂಜು ತಾರಾಗಣವಿದೆ.

ರಗಡ್‌ಗೆ ಅಭಿಮಾನ್‌ ರಾಯ್‌ ಅವರ ಸಂಗೀತ ನಿರ್ದೇಶನ, ಜೈ ಆನಂದ್‌ ಅವರ ಛಾಯಾಗ್ರಹಣ, ಥ್ರಿಲ್ಲರ್‌ ಮಂಜು, ಡಿಫರೆಂಟ್‌ ಡ್ಯಾನಿ ಹಾಗೂ ವಿನೋದ್‌ ಅವರ ಸಾಹಸ ನಿರ್ದೇಶನ ಇದೆ. ಎ. ಅರುಣ್‌ ಕುಮಾರ್‌ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.