
ರಾಜ್ ಬಿ.ಶೆಟ್ಟಿ
ನಟ ರಾಜ್ ಬಿ.ಶೆಟ್ಟಿ ಸಿನಿ ಬ್ಯಾಂಕ್ ಹಿಗ್ಗುತ್ತಲೇ ಇದೆ. ಪ್ರೇಕ್ಷಕರ ಮುಂದೆ ಏಕಾಏಕಿ ಪ್ರತ್ಯಕ್ಷಗೊಳ್ಳುವ ರೀತಿಯಲ್ಲಿ ಅವರ ಸಿನಿಮಾಗಳು ತೆರೆಕಾಣುತ್ತಿದೆ. ‘ಕರಾವಳಿ’, ‘ಜುಗಾರಿ ಕ್ರಾಸ್’, ‘ರಕ್ಕಸಪುರೋಳ್’ ಬಳಿಕ ಇದೀಗ ‘ಲ್ಯಾಂಡ್‌ಲಾರ್ಡ್’ನಲ್ಲೂ ರಾಜ್ ಬಣ್ಣಹಚ್ಚಿದ್ದು, ಈ ಬಾರಿ ಖಳನಾಯಕನಾಗಿ ಬಂದಿದ್ದಾರೆ.
–––
ಇಬ್ಬರು ನಿರ್ದೇಶಕ–ನಟರು ಓರ್ವ ನಿರ್ದೇಶಕನ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ನಲ್ಲಿ ಇಂಥ ಕಾಂಬಿನೇಷನ್ ಇದೆ. ನಟ, ನಿರ್ದೇಶಕ ‘ದುನಿಯಾ’ ವಿಜಯ್‌ಗೆ ಎದುರಾಳಿಯಾಗಿ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಿರುವವನೆದುರು ಆಳುವವನಾಗಿ ರಾಜ್ ನಟಿಸಿದ್ದಾರೆ.
ಸೋಮವಾರ (ಡಿ.8) ರಾಜ್ ಬಿ.ಶೆಟ್ಟಿ ಪಾತ್ರವನ್ನು ಚಿತ್ರತಂಡ ಅನಾವರಣಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್, ‘ಶೋಷಕ ವರ್ಗದಲ್ಲಿರುವ, ಅಧಿಕಾರವನ್ನು ಆನಂದಿಸುವ ಹಾಗೂ ಈ ಅಧಿಕಾರಕ್ಕಾಗಿ ಯಾವುದೇ ಹಂತಕ್ಕೂ ಹೋಗುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರಕ್ಕೆ ಕೂದಲಿರುತ್ತದೆ ಎಂದು ಜಡೇಶ್ ಹೇಳಿದಾಗ, ‘ಕೂದಲು ಬೇಕೇ?’ ಎಂದು ಕೇಳಿದ್ದೆ. ಸಿನಿಮಾ ನೋಡಿದಾಗ ಪಾತ್ರಕ್ಕೆ ಕೂದಲು ಅಗತ್ಯ ಇತ್ತು ಎಂದೆನಿಸಿತು. ಒಬ್ಬ ನಿರ್ದೇಶಕ ಗೆಲ್ಲಬೇಕು ಎನ್ನುವುದೇ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಮೊದಲ ಕಾರಣ. ಕೆಲವೊಮ್ಮೆ ಖಳನಾಯಕನ ಪಾತ್ರಗಳು ಪ್ರಚಾರಕ್ಕೆ ಸೀಮಿತವಾಗುತ್ತವೆ. ಆದರೆ ‘ಲ್ಯಾಂಡ್‌ಲಾರ್ಡ್’ನಲ್ಲಿ ಹಾಗಿಲ್ಲ. ಇದರಲ್ಲಿ ನನ್ನ ಪಾತ್ರಕ್ಕೆ ಅಸ್ಮಿತೆ ಇದೆ, ಬರವಣಿಗೆಯೂ ಚೆನ್ನಾಗಿದೆ. ನನ್ನ ಪಾತ್ರದಿಂದಾಗಿ ಕಥೆ ಮುಂದುವರಿಯುತ್ತದೆ. ಕೆಲವೊಮ್ಮೆ ಬರವಣಿಗೆಯಲ್ಲಷ್ಟೇ ಇಂಥ ಪಾತ್ರಗಳು ಇರುತ್ತವೆ. ಯಾವಾಗ ಪಕ್ಕದಲ್ಲಿರುವ ನಾಯಕನಿಗೆ ಖಳನಾಯಕನ ಪಾತ್ರದ ಮೇಲೆ ಜಿಗುಪ್ಸೆ ಬರುತ್ತದೆಯೋ ಆಗ ಖಳನಾಯಕನ ಪಾತ್ರ ಕುಗ್ಗುತ್ತದೆ. ಆದರೆ ವಿಜಯ್ ಅವರು ಆ ರೀತಿಯಿಲ್ಲ. ಅವರಿಗೆ ಪಾತ್ರಗಳ ಪ್ರಾಮುಖ್ಯತೆಯ ಬಗ್ಗೆ ಗೊತ್ತಿತ್ತು. ಕೋಲಾರ ಭಾಗದ ಕನ್ನಡದಲ್ಲಿ ಸಿನಿಮಾದ ಸಂಭಾಷಣೆಯಿದೆ. ನಾವಿಬ್ಬರೂ ನಿರ್ದೇಶಕರಾಗಿದ್ದರೂ ನಟರಾಗಷ್ಟೇ ಇಲ್ಲಿದ್ದೆವು. ನಿರ್ದೇಶಕರು ಮಾಡಿದ ಅಡುಗೆಯನ್ನು ಬಡಿಸುವುದಷ್ಟೇ ನಮ್ಮ ಕರ್ತವ್ಯ’ ಎಂದರು.
ಕೂದಲಿದ್ದಿದ್ದರೆ ನಟನಾಗುತ್ತಿರಲಿಲ್ಲ
‘ಈ ಗೆಟಪ್‌ನಲ್ಲಿ ನೋಡಿದ ಬಳಿಕ ನನಗೆ ಕೂದಲು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಆದರೆ ನನಗೆ ಕೂದಲು ಇದ್ದಿದ್ದರೆ ‘ಒಂದು ಮೊಟ್ಟೆಯ ಕಥೆ’ ಸಿನಿಮಾವೇ ಆಗುತ್ತಿರಲಿಲ್ಲ. ಜೊತೆಗೆ ನಾನು ನಟನೇ ಆಗುತ್ತಿರಲಿಲ್ಲ. ಕೂದಲು ಇಲ್ಲದೇ ಇರುವುದು ದೌರ್ಬಲ್ಯವಲ್ಲ. ಹೀಗಾಗಿಯೇ ಇಲ್ಲಿ ಕುಳಿತಿದ್ದೇನೆ. ಇಲ್ಲಿಯವರೆಗೂ ಮಾಡಲು ಆಗದೇ ಇರುವ ಪಾತ್ರಗಳ ಸವಾಲನ್ನು ಸ್ವೀಕರಿಸಬೇಕು ಎಂಬುವುದು ನನ್ನಲ್ಲಿತ್ತು. ಮಲಯಾಳದ ‘ಟರ್ಬೊ’ದಲ್ಲೂ ನಾನು ಖಳನಾಯಕನಾಗಿದ್ದೆ. ‘ಲ್ಯಾಂಡ್‌ಲಾರ್ಡ್’ನಲ್ಲಿರುವ ನನ್ನ ಖಳನಾಯಕನ ಪಾತ್ರವು ಎಲ್ಲಾ ಭಾವನೆಗಳನ್ನೂ ಹೊರಹಾಕುತ್ತದೆ. ಅತ್ತರೆ, ದುಃಖಪಟ್ಟರೆ ಆತ ಖಳನಾಯಕನಲ್ಲ ಎಂಬ ಮಾತಿದೆ. ಆದರೆ ಈ ಪಾತ್ರಕ್ಕೆ ಈ ಎಲ್ಲಾ ಭಾವನೆಗಳಿವೆ’ ಎಂದರು.
ಸಾರಥಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ ಸತ್ಯಪ್ರಕಾಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈ ಪಾತ್ರಕ್ಕೆ ರಾಜ್ ಅವರೇ ಬೇಕೆಂದು ಒತ್ತಾಯ ಮಾಡಿದ್ದೆ. ಭಾವನಾತ್ಮಕವಾಗಿ ಅವರನ್ನು ಕೇಳಿಕೊಂಡಿದ್ದೆ. ರಾಜ್ ಅವರು ಈ ಪಾತ್ರ ಮಾಡದೇ ಇದ್ದಿದ್ದರೆ ಇದೊಂದು ಸಾಮಾನ್ಯ ಸಿನಿಮಾವಾಗುತ್ತಿತ್ತು. ರೈತರಿಗೆ ಕೆಲಸಕ್ಕೆ ತಕ್ಕ ಕಾಸು ಎಂಬ ವಿಷಯದ ಮೇಲೆ ಈ ಸಿನಿಮಾವಿದೆ.
–ಜಡೇಶ್ ಕೆ.ಹಂಪಿ ನಿರ್ದೇಶಕ.
ಕಪ್ಪು–ಮೊಟ್ಟೆ ಸೇರಿದ್ರೆ ‘ವರ್ಲ್ಡ್‌ಕಪ್’
‘ಒಂದು ಕಾಲದಲ್ಲಿ ‘ನನ್ ತಾವ ಇರೋದು 15 ರೂಪಾಯಿ ಎಲ್ಡೇ ಎಲ್ಡು ಟೊಮ್ಯಾಟೊ ಕಣಣ್ಣಾ’ ಎಂದುಕೊಂಡು ನಾನು ಬಂದೆ. ರಾಜ್ ಅವರು ‘ಒಂದು ಮೊಟ್ಟೆಯ ಕಥೆ’ ಎಂದು ಬಂದರು. ಆವತ್ತು ನನ್ನನ್ನು ಆಡಿಕೊಂಡಂತೆ ರಾಜ್ ಅವರನ್ನೂ ಆಡಿಕೊಂಡಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಕೊನೆಯಲ್ಲಿ ನಾನೇ ‘ಉಳಿದಿರುವವನು’ ರಾಜ್ ಅವರೇ ‘ಆಳುವವ’ನಾದರು. ನಮ್ಮನ್ನು ಆಡಿಕೊಂಡವರಿಗೆ ತುಂಬುಹೃದಯದ ಧನ್ಯವಾದಗಳು. ನಾವು ಅಂದುಕೊಂಡಿರುವುದನ್ನು ಸಾಧಿಸುತ್ತೇವೆ. ಈ ವೇದಿಕೆ ನೋಡಿದಾಗ ನಾವು ಅನುಭವಿಸಿದ ನೋವು ಅನುಮಾನಗಳು ನೆನಪಿಗೆ ಬಂದವು’ ಎಂದರು ವಿಜಯ್. ‘ಈ ಸಿನಿಮಾದಲ್ಲಿ ಒಬ್ಬ ನಿರ್ದೇಶಕನ ಕೆಳಗಡೆ ಇಬ್ಬರು ನಿರ್ದೇಶಕರು ನಟರಾಗಿ ಏನೂ ಗೊತ್ತಿಲ್ಲದೇ ಇರುವ ರೀತಿ ಕೆಲಸ ಮಾಡಿದ್ದೇವೆ. ಜಡೇಶ್ ಜೊತೆಗೆ ನಿರ್ಮಾಪಕರಾದ ಹೇಮಂತ್ ಇನ್ನೊಂದಿಷ್ಟು ಸಿನಿಮಾ ಮಾಡಲಿ. ಒಂದು ಕಾಂಬಿನೇಷನ್ ಹಿಟ್ ಆದ ತಕ್ಷಣದಲ್ಲೇ ಎಲ್ಲರೂ ದೂರವಾಗುತ್ತಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಹೀಗಾಗಿರುವುದೇ ದೌರ್ಬಲ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.