ನಟ ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೋಳ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಾಹಸ ನಿರ್ದೇಶಕ ಕೆ.ರವಿವರ್ಮ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಪ್ರೇಮ್ ಜೊತೆ ಸಹಾಯಕ ನಿರ್ದೇಶಕರಾಗಿದ್ದ ರವಿ ಸಾರಂಗ ಚೊಚ್ಚಲ ನಿರ್ದೇಶನದ ಚಿತ್ರವಿದು. ನಟಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
‘ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ’ ಎಂದರು ರಾಜ್ ಬಿ ಶೆಟ್ಟಿ.
‘ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಅವರ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ‘ರಕ್ಕಸ’ ಎಂದರೆ ರಾಕ್ಷಸ. ‘ಪುರ’ ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತವೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು ‘ರಕ್ಕಸ’ ಎನ್ನಬಹುದು. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ’ ಎಂದರು ನಿರ್ದೇಶಕ ರವಿ ಸಾರಂಗ.
ಸ್ವಾತಿಷ್ಠ ಕೃಷ್ಣ ಚಿತ್ರದ ನಾಯಕಿ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.