ADVERTISEMENT

ಸ್ಟಾರ್ ನಟರಿಗೆ ಸಿನಿಮಾ ಮಾಡಲ್ಲ, ಮಾಡಿದ್ರೆ ಈ ನಟನಿಗೆ ಮಾತ್ರ: ರಾಜ್‌ ಬಿ. ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2025, 3:54 IST
Last Updated 6 ಆಗಸ್ಟ್ 2025, 3:54 IST
ರಾಜ್‌ ಬಿ. ಶೆಟ್ಟಿ 
ರಾಜ್‌ ಬಿ. ಶೆಟ್ಟಿ    

ಬೆಂಗಳೂರು: ‘ದೊಡ್ಡ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸುವುದಕ್ಕಿಂತ ನನಗೆ ಹೊಸಬರ ಜೊತೆಗಿನ ಸಣ್ಣ ಬಜೆಟ್ ಸಿನಿಮಾ ಮಾಡುವುದೇ ಹೆಚ್ಚು ಇಷ್ಟ’ ಎಂದು ನಟ, ನಿರ್ಮಾಪಕ ರಾಜ್‌.ಬಿ ಶೆಟ್ಟಿ ಹೇಳಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್- ಇಂಡಿಯಾ’ ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಅನುಪಮಾ ಚೋಪ್ರಾ ಅವರೊಂದಿಗೆ ಮಾತನಾಡಿದ ರಾಜ್‌ ಬಿ.ಶೆಟ್ಟಿ, ಮಲಯಾಳಂ ನಟ ದುಲ್ಖರ್ ಸಲ್ಮಾನ್ ಅವರಿಗೆ ಸಿನಿಮಾ‌ ನಿರ್ದೇಶಿಸುವ ಯೋಚನೆಯಿದೆಯೇ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.

'ಇಲ್ಲ, ಸ್ಟಾರ್‌ ನಟರಿಗೆ ನಾನು ಸಿನಿಮಾ ಮಾಡಲ್ಲ. ಅವರ ಡೇಟ್‌ಗೆ ಕಾಯುತ್ತ ಕೂರುವುದು ಕಷ್ಟದ ಕೆಲಸ. ದೊಡ್ಡ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸುವುದಕ್ಕಿಂತ ನನಗೆ ಹೊಸಬರ ಜೊತೆಗಿನ ಸಣ್ಣ ಬಜೆಟ್ ಸಿನಿಮಾ ಮಾಡುವುದೇ ಹೆಚ್ಚು ಇಷ್ಟ. ಅಂತಹ ಸಿನಿಮಾ ಮಾಡಿಕೊಂಡು ಖುಷಿಯಾಗಿ ಇದ್ದೇನೆ. ಸಿನಿಮಾ ಮಾಡುವುದೇ ನನ್ನ‌ ಉದ್ದೇಶವೇ ಹೊರತು ಹಣಕ್ಕಾಗಿ ಸಿನಿಮಾ ಮಾಡುವುದಲ್ಲ’ ಎಂದು ರಾಜ್ ವಿವರಿಸಿದ್ದಾರೆ.

ADVERTISEMENT

ಜೊತೆಗೆ, ನಾನು ಒಂದು ವೇಳೆ ಸ್ಟಾರ್ ಸಿನಿಮಾ ಮಾಡುವುದಿದ್ದರೆ ಅದು ಶಿವರಾಜ್ ಕುಮಾರ್ ಅವರೊಂದಿಗೆ ಮಾಡುತ್ತೇನೆ. ಅವರು ಸ್ಟಾರ್ ಎನ್ನುವ ಕಾರಣಕ್ಕಲ್ಲ, ಅವರು ಸ್ಟಾರ್ ಗಿರಿಗಿಂತಲೂ ತುಂಬಾ ಎತ್ತರದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರೊಂದಿಗೆ ಪರದೆ ಹಂಚಿಕೊಂಡ ಅನುಭವದ ಬಗ್ಗೆ ಮಾತನಾಡಿದ ಅವರು, 'ಬಾಲ್ಯದಲ್ಲಿ ಅವರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಕನಸಿನಲ್ಲಿ ಕೂಡ ಮುಂದೊಂದು ದಿನ ನಾನು ಅವರೊಂದಿಗೆ ನಟಿಸುವೆ ಅಂದುಕೊಂಡಿರಲಿಲ್ಲ. ಶಿವಣ್ಣ ನಟನೆ ಮಾಡುವಾಗ ಚಿತ್ರಮಂದಿರದಲ್ಲಿ ಕೂತು ಅವರ ಸಿನಿಮಾ ನೋಡುತ್ತಿದ್ದೇನೇನೋ ಎನ್ನುವಂತೆ ಭಾಸವಾಗುತ್ತಿತ್ತು. ಶಿಳ್ಳೆ ಹೊಡೆಯಬೇಕೋ, ಚಪ್ಪಾಳೆ ಹೊಡೆಯಬೇಕೋ ಎಂದು ಯೋಚಿಸುತ್ತಿದ್ದೆ’ ಎಂದು ನಗುತ್ತಾ ಹೇಳಿದ್ದಾರೆ.

ಥ್ರಿಲ್ಲರ್ ಸಿನಿಮಾ ನಿರ್ದೇಶನದತ್ತ ಚಿತ್ತ

'ಒಂದು ಪ್ರಕಾರದ‌ ಸಿನಿಮಾ ಮಾಡಿದ‌ ಮೇಲೆ ಅದೇ ಪ್ರಕಾರವನ್ನು ಆವರ್ತಿಸುವುದು ನನಗೆ ಇಷ್ಟವಿಲ್ಲ. ಹಾಸ್ಯ, ಗ್ಯಾಂಗ್ ಸ್ಟರ್ ಸಿನಿಮಾಗಳನ್ನು ಮಾಡಿದ್ದೇನೆ.‌ ಇನ್ನು ಮುಂದಿನ ಚಿತ್ರ ಥ್ರಿಲ್ಲರ್ ಪ್ರಕಾರವನ್ನು ಹೊಂದಿದೆ ಎಂದು ಚೋಪ್ರಾ ಅವರ ಪ್ರಶ್ನೆಯೊಂದಕ್ಕೆ ರಾಜ್ ಉತ್ತರಿಸಿದ್ದಾರೆ.

'ಶೆಟ್ಟಿ‌ ಗ್ಯಾಂಗ್’ ಹೇಳಿಕೆಗೆ ಟಾಂಗ್

'ನಾನು, ರಕ್ಷಿತ್ ಶೆಟ್ಟಿ‌ ಹಾಗೂ ರಿಷಭ್ ಶೆಟ್ಟಿ ಸಿನಿಮಾ ಕಾರಣಕ್ಕೆ ಗೆಳೆಯರಾದವರು. ಅದರ ಹೊರತು ಬೇರೇನಿಲ್ಲ. ಸಿನಿಮಾಗಾಗಿ‌ ನಾವು ಒಂದುಗೂಡಿ‌ ಕೆಲಸ ಮಾಡುತ್ತೇವೆ. ಆದರೆ ಅದನ್ನು ಹಲವರು 'ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್' ಎಂದೆಲ್ಲ ಕರೆಯುತ್ತಾರೆ. ನಿಮ್ಮಲ್ಲಿ ಯಾರು ಕೂಡಾ ಗ್ಯಾಂಗ್ ಕಟ್ಟಬೇಡಿ ಎಂದು ಹೇಳಿಲ್ಲ. ನಿಮ್ಮದೇ ಗ್ಯಾಂಗ್ ಸಿದ್ಧಗೊಳಿಸಿ ಸಿನಿಮಾ ಮಾಡಿ. ಅದು ಬಿಟ್ಟು ಯಾರೊಂದಿಗೂ ಬೆರೆಯಲು ಇಚ್ಛೆಪಡದೇ ಒಂಟಿಯಾಗಿ ಅಲೆದಾಡುತ್ತ ಇಂತಹ ಹೇಳಿಕೆ ಕೊಡುವುದರಲ್ಲಿ ಅರ್ಥವಿಲ್ಲ' ಎಂದು ರಾಜ್ ಟಾಂಗ್ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.