
ನಟ ರಾಜ್ ಬಿ.ಶೆಟ್ಟಿ ನಟನೆಯ, ರವಿ ಸಾರಂಗ ನಿರ್ದೇಶನದ ‘ರಕ್ಕಸಪುರದೋಳ್’ ಸಿನಿಮಾ ಫೆ.6ರಂದು ತೆರೆಕಾಣಲಿದ್ದು, ಈ ಸಿನಿಮಾ ಮೂಲಕ ಸಾಹಸ ನಿರ್ದೇಶಕ ಕೆ.ರವಿವರ್ಮಾ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ.
ಇತ್ತೀಚೆಗೆ ತಮ್ಮ ಜನ್ಮದಿನದ ಸಂದರ್ಭದಲ್ಲಿ ಸಿನಿಮಾ ಕುರಿತು ಮಾತನಾಡಿದ ಅವರು, ‘ಸಣ್ಣದೊಂದು ಪ್ರಯತ್ನವಿದು. ಬೆಳೆದು ಬಂದಂತಹ ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ನಿರ್ಮಾಣಕ್ಕೆ ಇಳಿದಿದ್ದೇನೆ. ನಿರ್ದೇಶಕ ರವಿ ಹಾಗೂ ನನ್ನ ಪರಿಚಯ ನಾಲ್ಕು ವರ್ಷಕ್ಕೂ ಅಧಿಕ. ರವಿ ಅವರು ಪ್ರೇಮ್ ಅವರ ಮೂಲಕ ರಾಜ್ ಬಿ.ಶೆಟ್ಟಿ ಅವರನ್ನು ಸಂಪರ್ಕಿಸಿ ಕಥೆ ಹೇಳಿದ್ದರು. ಮೊದಲು ರಾಜ್ ಬಿ.ಶೆಟ್ಟಿಯವರು ಕಥೆ ಕೇಳಿ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಂಡ ಮೇಲೆ ಕಥೆ ಭಿನ್ನವಾಗಿಯೇ ಇರಲಿದೆ ಎನ್ನುವ ನಂಬಿಕೆ ನನಗೆ ಬಂತು. ಇದಕ್ಕೂ ಮೊದಲು ತೆಲುಗಿನಲ್ಲಿ ಸಿನಿಮಾ ನಿರ್ಮಾಣದ ಆಫರ್ ಬಂದಿತ್ತು. ಕನ್ನಡ ಚಿತ್ರರಂಗದಲ್ಲೇ ಬೆಳೆದಿರುವ ಕಾರಣ, ಇಲ್ಲಿಯೇ ಮೊದಲ ಹೆಜ್ಜೆ ಇಟ್ಟೆ. ನನ್ನ ಈ ಪ್ರಯತ್ನಕ್ಕೆ ಕೆವಿಎನ್ ಸಂಸ್ಥೆ ಹಾಗೂ ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅವರು ಸಹಾಯ ಮಾಡಿದ್ದಾರೆ. ನಿರ್ಮಾಪಕರಾಗಿಯಷ್ಟೇ ಅಲ್ಲ, ಸಾಹಸ ನಿರ್ದೇಶಕನಾಗಿಯೂ ಇಲ್ಲಿ ಕೆಲಸ ಮಾಡಿದ್ದೇನೆ. ಮಳವಳ್ಳಿ, ಚಾಮರಾಜನಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ’ ಎಂದರು.
ನಿರ್ದೇಶಕ ಪ್ರೇಮ್ ಅವರ ಜೊತೆ ಕೆಲಸ ಮಾಡಿದ ಅನುಭವವಿರುವ ರವಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾ ಮೂಲಕ ಪೊಲೀಸ್ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.