ಚೆನ್ನೈ: ನಟ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾವು ಬಿಡುಗಡೆಗೂ ಮೊದಲೇ ದಾಖಲೆ ಬರೆಯುತ್ತಿದೆ. ಮಂಗಡ ಟಿಕೆಟ್ ಕಾಯ್ದಿರಿಸಿದ ಮೊತ್ತವು ಕೇವಲ ಎರಡು ದಿನಗಳಲ್ಲಿಯೇ ₹65 ಕೋಟಿಯಷ್ಟಾಗಿದೆ. ಆಗಸ್ಟ್ 14ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಮೊದಲ ನಾಲ್ಕು ದಿನಗಳವರೆಗೆ ಟಿಕೆಟ್ ಪೂರ್ತಿ ಬಿಕರಿಯಾಗಿದೆ.
ರಜನಿಕಾಂತ್ ಅವರ ಮೊದಲ ಸಿನಿಮಾ ‘ಅಪೂರ್ವ ರಾಗಂಗಳ್’ 1975ರ ಆಗಸ್ಟ್ 14ರಂದೇ ಬಿಡುಗಡೆಯಾಗಿತ್ತು. ರಜನಿಕಾಂತ್ ಅವರ ಸಿನಿಮಾ ಪಯಣ ಈಗ 50 ವರ್ಷ ಪೂರೈಸಿದೆ. ಈ ಕಾರಣಕ್ಕಾಗಿ ನಟನ ಅಭಿಮಾನಿಗಳು ‘ಕೂಲಿ’ ಸಿನಿಮಾದ ಬಿಡುಗಡೆ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಹಲವು ಕಂಪನಿಗಳು ಆ.14ರಂದು ರಜೆ ಘೋಷಿಸಿವೆ.
ಬಾಲಿವುಡ್ ನಟ ಅಮೀರ್ ಖಾನ್, ತೆಲುಗು ನಟ ನಾಗಾರ್ಜುನ, ಕನ್ನಡದ ನಟ ಉಪೇಂದ್ರ ಸೇರಿದಂತೆ ಹಲವು ಪ್ರಮುಖ ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದಲೂ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್ ಮೇಲೆಯೂ ನಿರೀಕ್ಷೆ ಹೆಚ್ಚಿದೆ. ಇವರದ್ದೇ ನಿರ್ದೇಶನದ ಕಮಲ್ ಹಾಸನ್ ಮತ್ತು ವಿಜಯ್ ಅಭಿನಯದ ‘ವಿಕ್ರಮ್’ ಸೇರಿದಂತೆ ಅವರ ಇತ್ತೀಚಿನ ಹಲವು ಚಿತ್ರಗಳು ಯಶಸ್ಸು ಗಳಿಸಿದ್ದವು.
ಸುಮಾರು ₹300 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಭಾರತ, ಶ್ರೀಲಂಕಾ, ಸಿಂಗಪುರ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 100 ದೇಶಗಳಲ್ಲಿ ಸುಮಾರು 4,500ರಿಂದ 5,000 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳುನಾಡಿನಲ್ಲಿಯೇ ಸುಮಾರು 980 ಪರದೆ ಮೇಲೆ ‘ಕೂಲಿ’ ಬಿಡಗಡೆಯಾಗಲಿದೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಸಿನಿಮಾದ ಟಿಕೆಟ್ ಕಾಯ್ದಿರಿಸಲು ಹೆಚ್ಚಿನ ಬೇಡಿಕೆ ಉಂಟಾಗಿದೆ.
₹100 ಕೋಟಿ ಮುಟ್ಟುವ ನಿರೀಕ್ಷೆ
ಆ. 15ರ ರಜೆ ಇದೆ. ಹೀಗಾಗಿ ವಾರಾಂತ್ಯದಲ್ಲಿ ಸಿನಮಾ ನೋಡುವವರ ಸಂಖ್ಯೆ ಹೆಚ್ಚು. ಹೀಗಾಗಿ ಗುರುವಾರದ ಒಳಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಮೊತ್ತವು ₹100 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ರಜನಿಕಾಂತ್ ಅವರ ಸಿನಿಮಾ ಪಯಣಕ್ಕೆ 50 ವರ್ಷ ಸಂದ ಗೌರವಾರ್ಥ ‘ಕೂಲಿ’ ಸಿನಿಮಾದ ತಾರಾಗಣ ತಾಂತ್ರಿಕ ವರ್ಗದ ಮಾಹಿತಿಗಳು ಬರುವುದಕ್ಕೂ ಮೊದಲು ರಜನಿಕಾಂತ್ ಅವರ ಸಿನಿ ಪಯಣವನ್ನು ವಿವರಿಸುವ 40 ಸೆಕೆಂಡ್‌ನ ವಿಡಿಯೊವೊಂದನ್ನು ಸೇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.