
ರಜನಿಕಾಂತ್, ಕಮಲ್ ಹಾಸನ್, ಸಿ. ಸುಂದರ್
ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ‘ತಲೈವರ್ 173’ ಸಿನಿಮಾ ಆರಂಭದಲ್ಲೇ ವಿಘ್ನ ಎದುರಿಸಿದೆ. ಕಮಲ್ ಹಾಸನ್ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಈ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಚಿತ್ರ ಘೋಷಣೆಯಾದ ನಾಲ್ಕೇ ದಿನಗಳಲ್ಲಿ ನಿರ್ದೇಶಕ ಸಿ. ಸುಂದರ್ ಹಿಂದೆ ಸರಿದಿರುವುದು ಈಗ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಇತ್ತೀಚೆಗೆ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ‘ತಲೈವರ್ 173’ ಸಿನಿಮಾ ಘೋಷಣೆ ಆಗಿತ್ತು. ಈ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಖುಷ್ಬೂ ಸುಂದರ್ ಅವರ ಪತಿ ಸಿ. ಸುಂದರ್ ಅವರು ರಜನಿಕಾಂತ್ ಅವರ 173ನೇ ಚಿತ್ರ ನಿರ್ದೇಶಿಸಬೇಕಿತ್ತು, ಆದರೆ ಇದೀಗ ಅಚ್ಚರಿ ಎಂಬಂತೆ ಸಿ.ಸುಂದರ್ ಸಿನಿಮಾದಿಂದ ದೂರ ಸರಿದಿದ್ದಾರೆ. ‘ಕಾರಣಾಂತರಗಳಿಂದ ನಾನು ಈ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?
‘ನನ್ನ ಪ್ರೀತಿಯ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣಗಳಿಂದಾಗಿ ‘ತಲೈವರ್ 173’ ಸಿನಿಮಾದಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಿಸಿದ್ದು, ನಿಜಕ್ಕೂ ನನಗೆ ಒಂದು ಕನಸು ನನಸಾದ ಹಾಗೇ ಆಗಿತ್ತು’ ಎಂದಿದ್ದಾರೆ.
‘ನಾನು ಅವರನ್ನು ಯಾವಾಗಲೂ ಅತ್ಯಂತ ಗೌರವದಿಂದ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳನ್ನು ಸ್ಮರಿಸುತ್ತೇನೆ. ಅವರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ. ಈ ಮಹತ್ವದ ಚಿತ್ರಕ್ಕೆ ನನ್ನನ್ನು ಪರಿಗಣಿಸಿದ್ದಕ್ಕಾಗಿ ಅವರಿಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸಿನಿಮಾ ಬಗ್ಗೆ ಕಾತರದಿಂದ ಕಾಯುತ್ತಿದ್ದವರನ್ನು ನಿರಾಶೆಗೊಳಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಿಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುವ ಮನರಂಜನೆಯನ್ನು ತರುವುದನ್ನು ಮುಂದುವರಿಸುತ್ತೇನೆ. ನನಗೆ ಬೆಂಬಲ ನೀಡಿದ್ದಕ್ಕೆ ಹಾಗೂ ನನ್ನನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.