ADVERTISEMENT

ರಕ್ಷಿತ್‌ ಶೆಟ್ಟಿ ಜನ್ಮದಿನ: ಜೂನ್‌ 10ಕ್ಕೆ ‘777 ಚಾರ್ಲಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 9:15 IST
Last Updated 6 ಜೂನ್ 2022, 9:15 IST
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌   

‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಮುಖಾಂತರ ಸ್ಯಾಂಡಲ್‌ವುಡ್‌ನ ಸಿಂಪಲ್‌ ಸ್ಟಾರ್‌ ಆದ ನಟ ರಕ್ಷಿತ್‌ ಶೆಟ್ಟಿ ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಅವರು ನಟಿಸಿದ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ಬಿಡುಗಡೆ ಹೊಸ್ತಿಲಿನಲ್ಲಿದೆ. ಜೊತೆಗೆ ಹೇಮಂತ್‌ ಎಂ. ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೀಸರ್‌ ಕೂಡಾ ಸೋಮವಾರ(ಜೂನ್‌ 6) ಸಂಜೆ 6 ಗಂಟೆಗೆ ರಿಲೀಸ್‌ ಆಗಲಿದೆ.

ರಕ್ಷಿತ್‌ ಅವರಿಗೆ ಚಂದನವನದ ಕಲಾವಿದರು ಜನ್ಮದಿನದ ಶುಭಾಶಯ ಕೋರಿದ್ದು, ‘ನಮ್ಮೊಳಗೆ ಹುಟ್ಟುವ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿ ನಮ್ಮ ಹುಟ್ಟು ಸಾರ್ಥಕವಾಗುತ್ತದೆ. ಪ್ರತಿ ಕ್ಷಣವು ‘ಸಿನಿಮಾ’ದ ಕನಸನ್ನು ಕಂಡು, ಕಾಪಾಡಿ, ಆನಂದಿಸಿ, ಆಚರಿಸುವವನು ನೀನು! ನಿನ್ನೆಲ್ಲಾ ಕನಸುಗಳು ಕೈಗೂಡಲಿ ಮಗಾ’ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಶುಭಹಾರೈಸಿದ್ದಾರೆ. ‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್‌ರಾಜ್‌ ಟ್ವೀಟ್‌ ಮಾಡಿ, ‘ನನ್ನ ಧರ್ಮನಿಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು. ನೀವಿಲ್ಲದೆ ಚಾರ್ಲಿ ಇಲ್ಲ, ಚಾರ್ಲಿಗೂ ನೀವೇ ಎಲ್ಲಾ’ ಎಂದಿದ್ದಾರೆ.

ADVERTISEMENT

ರಕ್ಷಿತ್‌ ಸಿನಿ ಪಯಣಕ್ಕೆ ದೊಡ್ಡ ಬ್ರೇಕ್‌ ನೀಡಿದ್ದ ‘ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಸಿನಿಮಾದ ನಿರ್ದೇಶಕ ಸಿಂಪಲ್‌ ಸುನಿ ಅವರೂ ರಕ್ಷಿತ್‌ಗೆ ಭಿನ್ನವಾಗಿ ಶುಭಹಾರೈಸಿದ್ದಾರೆ. ‘ಸಿಂಪಲ್ಲಾಗಿ ಗೋಧಿಬಣ್ಣದಲ್ಲಿ ಬಂದು ಉಳಿದವರೆಲ್ಲಾ ಕಂಡಂತೆ ವಾಸ್ತುಪ್ರಕಾರವಾಗಿ ಶ್ರೀಮನ್ನಾರಾಯಣನಾದ 777 ಚಾರ್ಲಿಯ ರಕ್ಷಿತ್‌ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದಿದ್ದಾರೆ.

ಕಳೆದ ಆರು ವರ್ಷದಲ್ಲಿ ಎರಡೇ ಸಿನಿಮಾಗಳಲ್ಲಿ ನಟಿಸಿರುವ ರಕ್ಷಿತ್‌ ಅವರ ಎರಡು ಸಿನಿಮಾಗಳುರಿಲೀಸ್‌ಗೆಸಜ್ಜಾಗಿವೆ. ಜೂನ್‌ 10ಕ್ಕೆ ‘777 ಚಾರ್ಲಿ’ ಸಿನಿಮಾ ತೆರೆಕಾಣಲಿದ್ದು, ಈಗಾಗಲೇ ದೇಶದ ಹಲವು ನಗರಗಳಲ್ಲಿ ಈ ಚಿತ್ರದ ಪ್ರೀಮಿಯರ್‌ ಶೋ ನಡೆಯುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣವೂ ಪೂರ್ಣಗೊಂಡಿದೆ. ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ.

ಇದಾದ ಬಳಿಕ ಕ್ರಮವಾಗಿ, ‘ರಿಚರ್ಡ್‌ ಆ್ಯಂಟನಿ’, ‘ಕಿರಿಕ್‌ ಪಾರ್ಟಿ–2’, ‘ಮಿಡ್‌ ವೇ ಟು ಮೋಕ್ಷ’ ಹಾಗೂ ‘ಪುಣ್ಯಕೋಟಿ’ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲು ರಕ್ಷಿತ್‌ ನಿರ್ಧರಿಸಿದ್ದಾರೆ. ಹೀಗಾಗಿ ಮುಂದಿನ ನಾಲ್ಕೈದು ವರ್ಷ ಬೇರೆ ನಿರ್ದೇಶಕರ ಪ್ರೊಜೆಕ್ಟ್‌ಗಳನ್ನೂ ಅವರು ಒಪ್ಪಿಕೊಳ್ಳುವುದು ಅನುಮಾನವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.