ADVERTISEMENT

ರಮ್ಯಾ ವಿರುದ್ಧ ಅಶ್ಲೀಲ ಸಂದೇಶ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ 'FIRE' ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2025, 12:28 IST
Last Updated 28 ಜುಲೈ 2025, 12:28 IST
ನಟಿ ರಮ್ಯಾ
ನಟಿ ರಮ್ಯಾ   

ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ದ ನಡೆದ ಅಶ್ಲೀಲ ಹಾಗೂ ಮಹಿಳಾ ವಿರೋಧಿ ಸಾಮಾಜಿಕ ಜಾಲತಾಣ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಫಿಲಂ ಇಂಡಸ್ಟ್ರಿ ಫಾ‌ರ್ ರೈಟ್ಸ್ ಆ್ಯಂಡ್‌ ಈಕ್ವಾಲಿಟಿ (ಫೈರ್) ಪತ್ರ ಬರೆದಿದೆ.

ಪತ್ರದಲ್ಲಿ ಏನಿದೆ?:

ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಶ್ಲೀಲ ಹಾಗೂ ಮಹಿಳಾ ವಿರೋಧಿ ಟ್ರೋಲಿಂಗ್ ಅನ್ನು ಫೈರ್ ತೀವ್ರವಾಗಿ ಖಂಡಿಸುತ್ತದೆ. ಭಾರತದ ಸಂವಿಧಾನದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಹಕ್ಕುಗಳು (ಸಂವಿಧಾನದ ವಿಧಿ 19) ನಮ್ಮ ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಅವುಗಳ ನಡುವೆ ಸಂವಾದ ನಡೆಯಬೇಕು. ಆದರೆ ಆ ಸಂವಾದ ಸಭ್ಯತೆಯೊಂದಿಗೆ ಮತ್ತು ಗೌರವಪೂರ್ಣವಾಗಿ ನಡೆಯಬೇಕು ಎಂದಿದೆ.

ADVERTISEMENT

ರಮ್ಯಾ ಅವರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ದೌರ್ಜನ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದೆ. ಆನ್‌ಲೈನಲ್ಲಿ ಮಹಿಳೆಯರ ವಿರುದ್ಧ ಪೋಸ್ಟ್‌ಗಳು ಭಾರತ ದಂಡಸಂಹಿತೆಯ ಸೆಕ್ಷನ್‌ (499, 500, 505(2), 509) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (ಸೈಬರ್ ಕಾನೂನು) ಅಡಿಯಲ್ಲಿ ದಂಡನೀಯವಾಗಿವೆ.

ಕರ್ನಾಟಕ ಗೃಹ ಇಲಾಖೆ ಮತ್ತು ಸೈಬರ್ ಕ್ರೈಂ ಪ್ರಾಧಿಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುವುದು ಫೈರ್‌ ಸಂಸ್ಥೆಯ ಆಗ್ರಹ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.