ADVERTISEMENT

ಸಾಯಿ ಪಲ್ಲವಿಯನ್ನು ಟ್ರೋಲ್‌ ಮಾಡುವುದು ನಿಲ್ಲಲಿ: ನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 11:02 IST
Last Updated 16 ಜೂನ್ 2022, 11:02 IST
ರಮ್ಯಾ
ರಮ್ಯಾ   

ಬೆಂಗಳೂರು: ‘ಸಾಯಿ ಪಲ್ಲವಿ ಅವರನ್ನು ಟ್ರೋಲ್‌ ಮಾಡುವುದು ಹಾಗೂ ಅವರಿಗೆ ಬೆದರಿಕೆಯೊಡ್ಡುವುದು ನಿಲ್ಲಬೇಕು’ ಎಂದು ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ಸಿನಿಮಾದ ಪ್ರಚಾರದ ಸಂದರ್ಶನವೊಂದರಲ್ಲಿ ಬಹುಭಾಷಾ ನಟಿ ಸಾಯಿ ಪಲ್ಲವಿ ಹೇಳಿದ್ದ ಮಾತುಗಳು ಪರ–ವಿರೋಧದ ಚರ್ಚೆಗೆ ಗ್ರಾಸವಾಗಿದೆ.

‘ಒಳ್ಳೆಯ ಮನುಷ್ಯನಾಗಿರು ಎಂಬುವುದನ್ನು ನನ್ನ ಕುಟುಂಬ ನನಗೆ ಕಲಿಸಿದೆ. ದಮನಿತರನ್ನು ರಕ್ಷಿಸು ಎನ್ನುವುದನ್ನು ಕಲಿಸಿದ ಕುಟುಂಬದೊಂದಿಗೆ ನಾನು ಬೆಳೆದೆ.ಬಲಪಂಥೀಯರು ಹಾಗೂ ಎಡಪಂಥೀಯರು ಎನ್ನುವುದನ್ನು ಕೇಳಿದ್ದೇನೆ. ಆದರೆ ಯಾರು ಸರಿ ಮತ್ತು ಯಾರು ತಪ್ಪು ಎಂದು ಹೇಳಲಾಗುವುದಿಲ್ಲ. ಕಾಶ್ಮೀರಿ ಫೈಲ್ಸ್‌ ಸಿನಿಮಾದಲ್ಲಿ ಕಾಶ್ಮೀರ ಪಂಡಿತರನ್ನು ಹೇಗೆ ಕೊಂದರು ಎನ್ನುವುದನ್ನು ತೋರಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ದನಗಳನ್ನು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ‘ಜೈ ಶ್ರೀರಾಮ್‌’ ಎನ್ನುತ್ತಾ ಕೆಲವರು ಥಳಿಸಿದ್ದರು. ಈ ಎರಡೂ ಘಟನೆಗಳಲ್ಲಿ ವ್ಯತ್ಯಾಸವೇನಿದೆ? ನಾವು ಚೆನ್ನಾಗಿದ್ದರೆ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನೀವು ಒಳ್ಳೆಯವರಾಗಿರದೇ ಇದ್ದರೆ ಯಾವ ಕಡೆಯೂ ನ್ಯಾಯ ಇರದು’ ಎಂದು ಸಾಯಿ ಪಲ್ಲವಿ ಉಲ್ಲೇಖಿಸಿದ್ದರು. ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು.

ADVERTISEMENT

ಸಾಯಿ ಪಲ್ಲವಿ ಹೇಳಿಕೆಯನ್ನು ರಮ್ಯಾ ಟ್ವೀಟ್‌ ಮೂಲಕ ಬೆಂಬಲಿಸಿದ್ದರು. ಗುರುವಾರ ಸರಣಿ ಟ್ವೀಟ್‌ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ರಮ್ಯಾ, ‘ಸಾಯಿ ಪಲ್ಲವಿ ಅವರನ್ನು ಟ್ರೋಲ್‌ ಮಾಡುವುದು ಹಾಗೂ ಅವರಿಗೆ ಬೆದರಿಕೆಯೊಡ್ಡುವುದು ನಿಲ್ಲಬೇಕು. ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅಥವಾ ಮಹಿಳೆಯರಿಗೆ ಈ ಅಧಿಕಾರ ಇಲ್ಲ ಎಂಬುವುದು ಈ ವಿರೋಧದ ಅರ್ಥವೇ? ನಿಂದನೆ ಮಾಡದೇ ವಿಷಯವೊಂದರ ಕುರಿತು ವಿರೋಧ ವ್ಯಕ್ತಪಡಿಸಬಹುದು. ಪ್ರಸ್ತುತ ಯಾರಾದರೂ ‘ನೀವು ಒಳ್ಳೆಯ ಮನುಷ್ಯರಾಗಿ’ ಅಥವಾ ‘ದಯಾಳುವಾಗಿ’ ಎಂದರೆ ಅವರಿಗೆ ರಾಷ್ಟ್ರ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತದೆ. ಅದೇ ‘ಗೋಲಿ ಮಾರೊ’ ಎಂಬುವವರು ನಿಜವಾದ ನಾಯಕರಾಗುತ್ತಾರೆ. ನಾವೆಂಥ ಲೋಕದಲ್ಲಿ ಬದುಕುತ್ತಿದ್ದೇವೆ’ ಎಂದು ರಮ್ಯಾ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.