ಏಳುಮಲೆ ಸಿನಿಮಾ ಪೋಸ್ಟರ್
ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದ ‘ಏಕ್ ಲವ್ ಯಾ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ರಕ್ಷಿತಾ ಸೋದರ ರಾಣಾ ಇದೀಗ ‘ಏಳುಮಲೆ’ ಏರಿದ್ದಾರೆ. ಈ ಸಿನಿಮಾ ಇಂದು(ಸೆ.5) ತೆರೆಕಂಡಿದ್ದು, ತಮ್ಮ ಎರಡನೇ ಸಿನಿಮಾ ಬಗ್ಗೆ ರಾಣಾ ಮಾತಿಗಿಳಿದಾಗ...
‘ಏಕ್ ಲವ್ ಯಾ’ ಸಿನಿಮಾ ಕಲಿಸಿದ ಪಾಠ...
ಆ ಸಿನಿಮಾ ನನ್ನ ಮೊದಲ ಹೆಜ್ಜೆ. ಇದರಿಂದ ಕಲಿತ ಪಾಠ ಹಲವು. ಪ್ರೇಮ್ ಅವರ ‘ದಿ ವಿಲನ್’ನಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಸ್ಕ್ರಿಪ್ಟ್‌ನಿಂದ ಹಿಡಿದು ಆ ಸಿನಿಮಾದ ಎಲ್ಲಾ ವಿಭಾಗದಲ್ಲೂ ನಾನು ಕಾರ್ಯನಿರ್ವಹಿಸಿದ್ದೆ. ಆಗ ತಾಂತ್ರಿಕ ತಂಡದಲ್ಲಿದ್ದ ನಾನು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದು ‘ಏಕ್ ಲವ್ ಯಾ’ ಸಿನಿಮಾದಿಂದಲೇ. ನಾಯಕನಾಗಿ ಬಣ್ಣಹಚ್ಚಿದಾಗ ಎಲ್ಲರ ಗಮನ ನನ್ನ ಮೇಲಿತ್ತು. ಇದು ಜವಾಬ್ದಾರಿಯನ್ನೂ ಹೆಚ್ಚಿಸಿತ್ತು. ಕಲಿಕೆ ಎನ್ನುವುದು ನಿರಂತರ. ‘ಏಕ್ ಲವ್ ಯಾ’ ವೇದಿಕೆ ಏರಿದಾಗ ಪ್ರೇಮ್ ಅವರಿಂದ ನಟನೆಯ ಹಲವು ವಿಷಯಗಳನ್ನು ಕಲಿತೆ. ‘ಏಳುಮಲೆ’ಯಲ್ಲಿ ನಿರ್ದೇಶಕ ಪುನೀತ್, ನಿರ್ಮಾಪಕ ತರುಣ್ ಅವರು ನನಗೆ ಗುರು ಆದರು. ದೃಶ್ಯವೊಂದಕ್ಕೆ ಹಲವು ದೃಷ್ಟಿಕೋನಗಳು ಇರುತ್ತವೆ. ಅವುಗಳೆಲ್ಲವೂ ಕಲಿಕೆಯೇ. ನನ್ನ ಯಾವ ಪ್ರೊಫೈಲ್ ಚೆನ್ನಾಗಿ ಕಾಣುತ್ತದೆ, ಯಾವ ರೀತಿ ಕ್ಯಾಮೆರಾ ಎದುರಿಸಬೇಕು ಎನ್ನುವುದನ್ನು ಮೊದಲ ಸಿನಿಮಾದ ಡಿಒಪಿ ಆಗಿದ್ದ ಮಹೇಂದ್ರ ಸಿಂಹ ಅವರಿಂದ ಕಲಿತೆ.
ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ವಿಳಂಬ ಯಾಕಾಯಿತು?
‘ಏಕ್ ಲವ್ ಯಾ’ ಬಳಿಕ ಹಲವು ಕಥೆಗಳನ್ನು ಕೇಳಿದೆ. ಸುಮಾರು ಎರಡು ವರ್ಷ ಹೀಗೆ ಕಳೆಯಿತು. ಸಾಲು ಸಾಲಾಗಿ ಸಿದ್ಧಸೂತ್ರದ ಕಮರ್ಷಿಯಲ್ ಕಥೆಗಳೇ ಬಂದಿದ್ದವು. ನಾಲ್ಕೈದು ಹಾಡು, ಮೂರ್ನಾಲ್ಕು ಫೈಟ್‌ಗಳಿದ್ದರೆ ಅದನ್ನು ಕಮರ್ಷಿಯಲ್ ಮಾಸ್ ಸಿನಿಮಾ ಜಾನರ್ ಎನ್ನುತ್ತಿದ್ದಾರೆ. ನನ್ನ ಪ್ರಕಾರ ಹೆಚ್ಚು ಪ್ರೇಕ್ಷಕರನ್ನು ತಲುಪುವ ಸಿನಿಮಾವೇ ಕಮರ್ಷಿಯಲ್ ಸಿನಿಮಾ. ಸಿದ್ಧಸೂತ್ರದ ಕಮರ್ಷಿಯಲ್ ಸಿನಿಮಾಗಳು ಹತ್ತಿಪ್ಪತ್ತು ವರ್ಷಗಳ ಹಿಂದೆ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ. ಇಂತಹ ಸಿನಿಮಾ ಈಗ ಮಾಡಿದರೆ ಜನಕ್ಕೆ ಕನೆಕ್ಟ್ ಆಗಲು ಸಾಧ್ಯವೇ ಇಲ್ಲ. ಒಟಿಟಿ ಎನ್ನುವುದು ಬಂದ ಬಳಿಕ ಜನರು ಎಲ್ಲಾ ಮಾದರಿಯ ಕಥೆ, ಕಾಂಟೆಂಟ್‌ಗಳನ್ನು ನೋಡಿದ್ದಾರೆ. ಹೀಗಾಗಿ ಅವರಿಗೆ ಹೊಸದೇನಾದರೂ ನೀಡಬೇಕು. ಹೊಸ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ನನ್ನ ಮೇಲೂ ಒತ್ತಡವಿತ್ತು. ನಿರಂತರವಾಗಿ ಸಿನಿಮಾ ಮಾಡಬೇಕು ಎಂಬ ಸಲಹೆಗಳೂ ಬರುತ್ತಿದ್ದವು. ಈ ಒತ್ತಡದಲ್ಲಿ ಹೆಜ್ಜೆ ಇಟ್ಟು, ಆ ಸಿನಿಮಾಗಳು ಸೋತರೆ ವಿಧಿ ಇಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಅವಕಾಶಗಳು ಸಿಗುವುದೇ ವಿರಳ. ಹೀಗಿರುವಾಗಿ ಇಡುವ ಹೆಜ್ಜೆಯನ್ನು ಜಾಗ್ರತೆಯಿಂದ ಇಡಬೇಕು. ಅವಸರದಲ್ಲಿ ಹೆಜ್ಜೆ ಇಡುವುದಕ್ಕಿಂತ ಗಟ್ಟಿಯಾದ ಕಥೆ ಇರುವ ಸಿನಿಮಾಗಾಗಿ ಕಾಯುತ್ತಾ ಮನೆಯಲ್ಲಿ ಇರುವುದು ವಾಸಿಯಲ್ಲವೇ?
ನಾನು ಈ ನಿಟ್ಟಿನಲ್ಲಿ ಒಳ್ಳೆಯ ಕಾಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾಗಾಗಿ ಕಾಯುತ್ತಿದ್ದೆ. ನಮ್ಮ ಮಣ್ಣಿನ ಕಥೆ–ನಮ್ಮನೆ ಹುಡುಗ ಎಂಬ ಮಾತು ಜನರಿಂದ ಬರಬೇಕು. ಆಗ ಸಿಕ್ಕಿದ್ದು ‘ಏಳುಮಲೆ’. ಮೊದಲು ಈ ಕಥೆಯನ್ನು ತರುಣ್ ಅವರು ಪಿಚ್ ಮಾಡಿದ್ದರು. ಬಳಿಕ ಪುನೀತ್ ರಂಗಸ್ವಾಮಿ ಅವರು ಕಥೆ ವಿವರಿಸಿದ್ದರು. ಪ್ರೇಕ್ಷಕನಾಗಿ ಕುಳಿತು ಈ ಸಿನಿಮಾ ಕಥೆ ಕೇಳಿದಾಗ ಅದು ನನಗೆ ಒಪ್ಪಿಗೆಯಾಯಿತು. ಹೀಗಾದಾಗ ನಾನೂ ಆ ಪಾತ್ರವನ್ನು, ಕಥೆಯನ್ನು ಜನರಿಗೆ ಒಪ್ಪಿಸಲು ಸಾಧ್ಯ. ನಿರ್ದೇಶನ, ಸಿನಿಮಾ ನಿರ್ಮಾಣದಲ್ಲೂ ತರುಣ್ ಅವರು ತಮ್ಮನ್ನು ಸಾಬೀತುಪಡಿಸಿಕೊಂಡಿದ್ದಾರೆ. ನನ್ನ ಎರಡನೇ ಹೆಜ್ಜೆಗೆ ಈ ಸಿನಿಮಾ ಸೂಕ್ತವಾಗಿರಲಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ.
ಹೊಸಬರನ್ನು ಜನರು ಸ್ವೀಕರಿಸುತ್ತಿರುವ ಬಗೆ...
ಯಾವತ್ತಿದ್ದರೂ ಕಥೆಯೇ ಕಿಂಗ್. ಯಾವುದೇ ದೊಡ್ಡ ನಿರ್ಮಾಣ ಸಂಸ್ಥೆ, ದೊಡ್ಡ ನಿರ್ದೇಶಕ–ನಟರನ್ನು ನೋಡಿಕೊಂಡು ಜನರು ಸಿನಿಮಾ ಗೆಲ್ಲಿಸುವುದಿಲ್ಲ. ಇಂತಹ ಸಿನಿಮಾಗಳು ನಾಲ್ಕೈದು ದಿನ ಓಡಬಹುದಷ್ಟೇ. ಸಿನಿಮಾದ ಕಥೆ ಚೆನ್ನಾಗಿದ್ದರೆ ಅದಕ್ಕೆ ಯಶಸ್ಸು ಖಚಿತ. ಈ ನಿಟ್ಟಿನಲ್ಲಿ ‘ಏಳುಮಲೆ’ಯ ಕಥೆ ಮೇಲೆ ನನಗೆ ನಂಬಿಕೆ ಇದೆ. ಇತ್ತೀಚೆಗೆ ಚಿತ್ರಮಂದಿರಗಳ ಸಮಸ್ಯೆಯಾಗುತ್ತಿದೆ, ಒಟಿಟಿ ವಹಿವಾಟು ಆಗುತ್ತಿಲ್ಲ ಎಂದು ಹಲವರು ದೂರುತ್ತಿದ್ದಾರೆ. ಕಾಂಟೆಂಟ್ ದೃಷ್ಟಿಯಿಂದ ಗೆದ್ದ ಸಿನಿಮಾಗಳಿಗೆ ಈ ಸಮಸ್ಯೆಗಳೇ ಆಗಿಲ್ಲ. ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸಿದರೆ ಉಳಿದ ಸಮಸ್ಯೆಗಳೆಲ್ಲವೂ ತಾನಾಗಿಯೇ ಬಗೆಹರಿಯುತ್ತವೆ. ಸಮುದ್ರದಲ್ಲಿನ ಅಲೆಗಳಂತೆ ಒಳ್ಳೆಯ ಕಥೆಗಳಿರುವ ಸಿನಿಮಾಗಳು ನಿರಂತರವಾಗಿ ಪ್ರೇಕ್ಷಕರಿಗೆ ಬಡಿಯುತ್ತಿರಬೇಕು. ನಮ್ಮ ಸಿನಿಮಾದಲ್ಲೂ ಈ ರೀತಿಯ ಶಕ್ತಿ ಇದೆ.
ಚಿತ್ರೀಕರಣದ ಸಂದರ್ಭದಲ್ಲಿನ ಸವಾಲುಗಳು ಹಾಗೂ ಪಾತ್ರದ ಬಗ್ಗೆ ವಿವರಣೆ...
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ನಡೆದ ನೈಜ ಕಥೆ ಇದು. ಕಾಲ್ಪನಿಕ ಕಥೆಯ ಮಿಶ್ರಣವೂ ಇದೆ. ಕ್ವಾಲಿಸ್ ಗಾಡಿಯ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಮೈಸೂರು ಹುಡುಗನ ಪಾತ್ರದಲ್ಲಿ ನಾನಿದ್ದೇನೆ. ಪಾತ್ರಕ್ಕೆ ಹೆಚ್ಚಿನ ಆಡಂಬರವಿಲ್ಲ. 2004ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಒಂದು ರಾತ್ರಿಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಒಂದು ಘಟನೆಯು ಪ್ರೇಮಿಗಳಿಬ್ಬರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಆ ಒಂದು ರಾತ್ರಿಯಲ್ಲಿ ಏನೇನು ನಡೆಯುತ್ತದೆ ಎನ್ನುವುದು ಕಥಾಹಂದರ. ‘ರೇವತಿ’ ಎಂಬ ತಮಿಳುನಾಡಿನ ಹುಡುಗಿ ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಸಿನಿಮಾದುದ್ದಕ್ಕೂ ಹಲವು ತಿರುವುಗಳಿವೆ. ಚಿತ್ರಕಥೆಯು ಬಹಳ ವೇಗವಾಗಿದೆ. ಇದು ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸಲಿದೆ.
ಹಲವು ಸವಾಲುಗಳು ಚಿತ್ರೀಕರಣದ ವೇಳೆ ಎದುರಾಗಿತ್ತು. ಕಾಡಿನಲ್ಲೇ ಕೇವಲ ರಾತ್ರಿಯಲ್ಲಿ ಇಡೀ ಸಿನಿಮಾ ಚಿತ್ರೀಕರಣವಿತ್ತು. ಟ್ರೇಲರ್‌ನ ಆರಂಭದಲ್ಲಿ ನಾನು ನೀರಿನಲ್ಲಿ ಬಿದ್ದಿರುವ ದೃಶ್ಯ ನೋಡಿರಬಹುದು. ಕೆಲ ಸೆಕೆಂಡ್‌ಗಳ ಈ ದೃಶ್ಯಕ್ಕೆ ನಾಲ್ಕೈದು ತಾಸು ನೀರಿನಲ್ಲಿ ನಾನಿದ್ದೆ. ಆ ದಟ್ಟ ಕಾಡು ಹಾಗೂ ನೀರಿನೊಳಗೆ ಏನಿರುತ್ತದೋ ಎನ್ನುವ ಭಯದಿಂದಲೇ ಶೂಟಿಂಗ್ ಮಾಡಿದ್ದೆವು. ಭಿನ್ನವಾದ ಅನುಭವ ಈ ಸಿನಿಮಾದಿಂದ ದೊರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.