ADVERTISEMENT

ಭಾರತದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದ ರಣವೀರ್‌ ನಟನೆಯ ಧುರಂಧರ್

ಪಿಟಿಐ
Published 7 ಜನವರಿ 2026, 13:14 IST
Last Updated 7 ಜನವರಿ 2026, 13:14 IST
<div class="paragraphs"><p>ಚಿತ್ರ: ಪ್ರಜಾವಾಣಿ</p></div>
   

ಚಿತ್ರ: ಪ್ರಜಾವಾಣಿ

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್’ ಸಿನಿಮಾ ಭಾರತದಲ್ಲಿ ₹831 ಕೋಟಿಗೂ ಹೆಚ್ಚು ಗಳಿಸುವ ಮೂಲಕ, ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ ಎಂದು ಚಿತ್ರದ ನಿರ್ಮಾಪಕ ಆದಿತ್ಯಧರ್ ಬುಧವಾರ ತಿಳಿಸಿದ್ದಾರೆ.

ಧುರಂಧರ್‌ ಸಿನಿಮಾ, ಪ್ರದರ್ಶನದ 33ನೇ ದಿನ ₹5.70 ಕೋಟಿ ಗಳಿಕೆಯೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ ₹831.40 ಕೋಟಿಯಾಗಿದೆ. ಹಿಂದಿ ಚಿತ್ರಗಳಲ್ಲಿ ಈವರೆಗೆ ಹೆಚ್ಚು ಗಳಿಕೆ ಮಾಡುವ ಮೂಲಕ ಮೊದಲನೇ ಸ್ಥಾನಕ್ಕೇರಿದೆ.

ADVERTISEMENT

’ಇತಿಹಾಸವನ್ನು ಪುನಃ ಬರೆಯಲಾಗಿದೆ. ಮಂಗಳವಾರದ ಪ್ರಕಾರ, 'ಧುರಂಧರ್' ಅಧಿಕೃತವಾಗಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ, ಇದು ಭಾರತೀಯ ಬಾಕ್ಸ್ ಆಫೀಸ್ ಯಶಸ್ಸನ್ನು ಪುನರ್ ವ್ಯಾಖ್ಯಾನಿಸಿದ ಅತ್ಯುನ್ನತ ಸಾಧನೆಯಾಗಿದೆ’ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.

ಈ ಹಿಂದೆ ಹೆಚ್ಚು ಗಳಿಕೆ ಕಂಡ ಸಿನಿಮಾಗಳಿವು

2023ರಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ ’ಪುಷ್ಪ 2’ ಈವರೆಗೆ ಹಿಂದಿ ಭಾಷೆಯಲ್ಲಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಮೊದಲ ಸ್ಥಾನದಲ್ಲಿತ್ತು. ಪುಷ್ಪ 2 ಹಿಂದಿ ಭಾಷೆಯಲ್ಲಿ ₹830 ಕೋಟಿ ಗಳಿಸಿ ದಾಖಲೆ ಬರೆದಿತ್ತು.

ಶಾರುಕ್ ಖಾನ್ ಅವರ ‘ಜವಾನ್’ ಮತ್ತು ಹಾರರ್ ಕಾಮಿಡಿ ’ಸ್ತ್ರೀ 2’ ಸಿನಿಮಾಗಳು ಉತ್ತಮ ಗಳಿಕೆ ಕಂಡಿದ್ದವು. ಇದೀಗ ಈ ಎರಡೂ ಸಿನಿಮಾವನ್ನು ಹಿಂದಿಕ್ಕಿ ಧುರಂಧರ್‌ ಮೊದಲ ಸ್ಥಾನ ಪಡೆದುಕೊಂಡಿದೆ. 

ಧುರಂಧರ್‌ ಗಳಿಕೆಯ ಪಯಣ ಹೀಗಿತ್ತು

ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಧುರಂಧರ್‌ ಮೊದಲ ವಾರದಲ್ಲಿ ₹218 ಕೋಟಿ, ಎರಡನೇ ವಾರದಲ್ಲಿ ₹261.50 ಕೋಟಿ, ಮೂರನೇ ವಾರದಲ್ಲಿ 189.30 ಕೋಟಿ ಹಾಗೂ ನಾಲ್ಕನೇ ವಾರದಲ್ಲಿ ₹115.70 ಕೋಟಿ ಗಳಿಸಿದೆ. ಐದನೇ ವಾರಾಂತ್ಯದಲ್ಲಿ ₹35.80 ಕೋಟಿ ಗಳಿಸಿದೆ. ಸದ್ಯ ಪ್ರದರ್ಶನ ಮುಂದುವರೆದಿದ್ದು, ಇನ್ನಷ್ಟು ಗಳಿಸುವ ನಿರೀಕ್ಷೆ ಇದೆ.  

ಸಿನಿಮಾವು ರಾಜಕೀಯ, ಭಯೋತ್ಪಾದಕ ಚಟುವಟಿಕೆಗಳು ಹಾಗೂ ಗುಪ್ತಚರ ಕಾರ್ಯಾಚರಣೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ.

ಬಾಲಿವುಡ್‌ನ ಯಶ್ ರಾಜ್ ಫಿಲ್ಮ್ಸ್ ಧುರಂಧರ್‌ ಚಿತ್ರ ತಂಡವನ್ನು ಅಭಿನಂದಿಸಿದೆ. ’ಧುರಂಧರ್ ಒಂದು ಚಿತ್ರವಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಒಂದು ಮೈಲಿಗಲ್ಲು’ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.