ADVERTISEMENT

ಇದು ಶ್ರೀವಲ್ಲಿಯ ‘ಪುಷ್ಪ’ ಪುರಾಣ: ರಶ್ಮಿಕಾ ಮಂದಣ್ಣ ಸಂದರ್ಶನ

ಶರತ್‌ ಹೆಗ್ಡೆ
Published 16 ಡಿಸೆಂಬರ್ 2021, 22:30 IST
Last Updated 16 ಡಿಸೆಂಬರ್ 2021, 22:30 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ಕೋವಿಡ್‌ ದೀರ್ಘ ಬ್ರೇಕ್‌ನ ನಂತರ ಮತ್ತೆ ಚಿತ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಕೊಡಗಿನ ಬೆಡಗಿ, ‘ನ್ಯಾಷನಲ್‌ ಕ್ರಷ್‌’ ರಶ್ಮಿಕಾ ಮಂದಣ್ಣ . ಅವರ ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪ’ ಇಂದು ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಅವರ ಸಿನಿಪಯಣ ತೆರೆದುಕೊಂಡದ್ದು ಹೀಗೆ...

ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾದಿಂದ ಕಿರಿಕ್‌ ಪಾರ್ಟಿಯ ಸಾನ್ವಿ ಜೋಸೆಫ್‌ವರೆಗೆ, ಈಗ ‘ಪುಷ್ಪ’ದಲ್ಲಿನ ಚಿತ್ತೂರು ಹುಡುಗಿ ಶ್ರೀವಲ್ಲಿಯವರೆಗೆ ಹೇಗಿದೆ ಈ ಪ್ರಯಾಣ?

ಈ ಪ್ರಯಾಣ ತುಂಬಾ ಎಂಗೇಜಿಂಗ್‌ ಆಗಿತ್ತು. ಪ್ರತಿದಿನ ಹೊಸ ಜನರನ್ನು ಭೇಟಿಯಾಗುತ್ತಿದ್ದೆ. ಸಾನ್ವಿ ಜೋಸೆಫ್‌ನಿಂದ ‘ಪುಷ್ಪ’ದ ಶ್ರೀವಲ್ಲಿಯವರೆಗೂ ಪ್ರತಿ ಪಾತ್ರವೂ ಭಿನ್ನವಾಗಿಯೇ ಸಿಕ್ಕಿದೆ. ಜನ ಮೆಚ್ಚಿಕೊಂಡಿದ್ದಾರೆ. ಇದರ ಹಿಂದೆ ತುಂಬಾ ಶ್ರಮ ಇದೆ.

ADVERTISEMENT

‘ನ್ಯಾಷನಲ್‌ ಕ್ರಷ್‌’ ಎಂದು ಗೂಗಲ್‌ ಗೌರವಕ್ಕೆ ಪಾತ್ರರಾದಿರಿ. ಅಭಿಮಾನಿಗಳು ನಿಮ್ಮ ಮನೆಯವರೆಗೂ ಹುಡುಕಿಕೊಂಡು ಬಂದರು. ಈ ಬೆಳವಣಿಗೆ ನೋಡುವಾಗ ಏನನ್ನಿಸುತ್ತದೆ?

ನಾನು ಇದನ್ನೆಲ್ಲಾ ಊಹಿಸಿಕೊಂಡಿರಲಿಲ್ಲ. ಅಭಿಮಾನಿಗಳು ಹುಡುಕಿಕೊಂಡು ಬರುವಾಗ ಖುಷಿಯಾಗುತ್ತದೆ. ಬೇಸರವೂ ಆಗುತ್ತಿದೆ. ಏಕೆಂದರೆ ಅವರು ಪ್ರೀತಿಯಿಂದ ಹುಡುಕಿಕೊಂಡು ಬರುತ್ತಾರೆ. ಅದು ಖುಷಿಯ ಸಂಗತಿ. ಆದರೆ, ಅವರು ಬರುವಾಗ ನಾನು ಅಲ್ಲಿ ಇರೋದಿಲ್ಲ. ಅದು ಬೇಸರದ ಸಂಗತಿ.

ಕೊಡಗಿನ ಸೊಗಡು, ಕನ್ನಡದ ಕಂಪು ಎಷ್ಟರಮಟ್ಟಿಗೆ ಆವರಿಸಿದೆ?

ಹೌದು, ನಾನು ಪ್ರಪಂಚದ ಎಲ್ಲೇ ಹೋಗಲಿ ಏನೇ ಪ್ರತಿಭೆ ತೋರಿಸಲಿ. ನನ್ನಲ್ಲಿ ಕನ್ನಡತಿ ಇದ್ದಾಳೆ. ಕೊಡಗಿನ ಮಗಳು ಎಂದು ಹೇಳಿಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಇದೆ.

‘ಪುಷ್ಪ’ದ ಚಿತ್ತೂರು ಹುಡುಗಿ ತೆರೆಯ ಮೇಲೆ ಹೇಗೆ ಕಾಣಿಸಲಿದ್ದಾಳೆ?

ತುಂಬಾ ಶಾಕ್‌ ಅನಿಸುವಂತೆ ಆ ಲುಕ್‌ ಇದೆ. ಶ್ರೀವಲ್ಲಿ ಪಾತ್ರದೊಳಗೆ ತೊಡಗಿಸಿಕೊಂಡಾಗ ನನಗೇ ಶಾಕ್‌ ಆಗಿತ್ತು. ನಾನು ಪಾತ್ರದೊಳಗೆ ಹೆಚ್ಚು ತಲ್ಲೀನಳಾದೆ. ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ನನಗೂ ಕಾತರವಿದೆ. ಡಬ್ಬಿಂಗ್‌ನ ವೇಳೆ ನನ್ನನ್ನು ನಾನು ನೋಡಲಿಲ್ಲ. ಪಾತ್ರವಾಗಿಯೇ ನೋಡಿದೆ. ಏನಿದ್ದರೂ ಡಿ. 17ರವರೆಗೆ ಕಾಯಬೇಕು.

ನಿಮ್ಮ ಮತ್ತು ಅಲ್ಲು ಅರ್ಜುನ್‌ ಅವರಹೊಂದಾಣಿಕೆ ಹೇಗಿದೆ?

ಇಬ್ಬರ ಕೆಮೆಸ್ಟ್ರಿ ತುಂಬಾ ಭಿನ್ನವಾಗಿದೆ. ಚಿತ್ತೂರಿನ ಸೊಗಡು, ನಡವಳಿಕೆ ಎಲ್ಲವೂ ಭಿನ್ನ. ಭಾರತೀಯ ಚಿತ್ರಗಳ ಪೈಕಿ ಅದೊಂದು ಬೇರೆಯೇ ರೀತಿಯ ಪ್ರಪಂಚವನ್ನು ಕಟ್ಟಿಕೊಡಲಿದೆ. ಪುಷ್ಪ ಮತ್ತು ಶ್ರೀವಲ್ಲಿ ಪಾತ್ರ ಜನರಿಗೆ ಇಷ್ಟವಾಗಲಿದೆ. ಈ ಚಿತ್ರ 5 ಭಾಷೆಗಳಲ್ಲಿ ಬರಲಿದೆ.

ಚಿತ್ತೂರು ಶೈಲಿಯ ತೆಲುಗು ಕಲಿಯಬೇಕಾದರೆ ಬಹಳ ಕಷ್ಟಪಟ್ಟೆ. ಶಬ್ದಗಳು ಅದೇ ತೆಲುಗು ಆದರೂ ಮಾತನಾಡುವ ಶೈಲಿಯೇ ಬೇರೆ. ಅಲ್ಲಿ ಚಿತ್ತೂರು ಜನರನ್ನು ಬಳಸಿಕೊಂಡೆವು. ಸ್ಕ್ರಿಪ್ಟ್‌ ಬರೆಯುವಾಗ, ಡಬ್ಬಿಂಗ್‌ ವೇಳೆ ಅಲ್ಲಿನ ಸೊಗಡು ಗೊತ್ತಿರುವವರೇ ಜೊತೆಗಿದ್ದರು. ಸಣ್ಣ ತಪ್ಪಾದರೂ ಅಲ್ಲಿ ಎಚ್ಚರಿಸುತ್ತಿದ್ದರು.

ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸುತ್ತೀರಾ?

ಖಂಡಿತವಾಗಿಯೂ ನಾನು ಕಾಯುತ್ತಿದ್ದೇನೆ. ನಾನು ಯಾವುದೇ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಸಿದ್ಧಳಿದ್ದೇನೆ.

ವೆಬ್‌ ಸಿರೀಸ್‌ಗಳತ್ತ ಅಥವಾ ಒಟಿಟಿ ವೇದಿಕೆಗಳ ಕ್ಷೇತ್ರದಲ್ಲಿ ರಶ್ಮಿಕಾ?

ವೆಬ್‌ಸಿರೀಸ್‌ ವೇದಿಕೆಗಳಲ್ಲಿ ಆಸಕ್ತಿದಾಯಕ, ಒಳ್ಳೆಯ ಪಾತ್ರ ಸಿಕ್ಕಿದರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ.

ಕೊಡಗಿನ ಅಕ್ಕಿ ರೊಟ್ಟಿ ಇತ್ಯಾದಿ ತಿನಿಸುಗಳನ್ನು ಡಿಜಿಟಲ್‌ ವೇದಿಕೆಯಲ್ಲಿ ಇನ್ನಷ್ಟು ಖ್ಯಾತಿಗೊಳಿಸಿದಿರಿ. ಅಡುಗೆ ಇಷ್ಟವಾ? ಬಿಡುವಿನ ವೇಳೆ ಏನು ಮಾಡುತ್ತೀರಿ?

ಹೌದು, ಅಕ್ಕಿರೊಟ್ಟಿ ಮಾಡುತ್ತೇನೆ. ಅದು ನಮ್ಮ ಸಂಸ್ಕೃತಿಯಲ್ಲೇ ಇದೆ. ಅಡುಗೆ ಮಾಡುವುದೂ ನನಗಿಷ್ಟ. ನಮ್ಮ ಭಾಗದ ವಿಶೇಷ ಹಬ್ಬಗಳಲ್ಲಿ, ಬುಡಕಟ್ಟು ಹಬ್ಬಗಳಲ್ಲಿ ವಿಶೇಷ ತಿನಿಸುಗಳನ್ನು ಮಾಡುತ್ತೇನೆ

ಕೋವಿಡ್‌ ಸಮಯದಲ್ಲಿ ತೊಂದರೆಗಳ ಮಧ್ಯೆ ಒಂದಿಷ್ಟು ಸಕಾರಾತ್ಮಕ ಸ್ಫೂರ್ತಿ ತುಂಬುವ ಕೆಲಸ ಮಾಡಿದಿರಿ. ಆ ಬಗ್ಗೆ ಹೇಳಿ.

ಕೋವಿಡ್‌ ಸಮಯದಲ್ಲಿ ಎಲ್ಲರೂ ಸಂಕಷ್ಟಕ್ಕೆ ಒಳಗಾದೆವು. ಆಗ ನಮಗೆಲ್ಲರಿಗೂ ವೈಯಕ್ತಿಕವಾಗಿ ಮಾನವೀಯತೆಯ ಸ್ಪರ್ಶ ಆಯಿತು. ಆಗ ನಾವು ಅಗತ್ಯವುಳ್ಳವರಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂದು ಅನಿಸಿತು. ಅದನ್ನು ಮುಂದೆಯೂ ಮಾಡುತ್ತೇನೆ.

ನಿಮ್ಮ ಮುಂದಿನ ಕನಸುಗಳು?

ಚಿತ್ರರಂಗಕ್ಕೆ ಬಂದಾಗಲೇ ಜನರನ್ನು ಮನರಂಜಿಸಬೇಕು. ಜನರ ಮುಖದಲ್ಲಿ ನಗು ಮೂಡಿಸಬೇಕು. ಅವರು ಖುಷಿಯಾಗಿರಬೇಕು. ಅವರು ನಮ್ಮ ಬಗ್ಗೆ ಹೆಮ್ಮೆಪಡುವಂತಾಗಬೇಕು ಎಂಬುದೇ
ನನ್ನ ಗುರಿಯಾಗಿತ್ತು. ಅದನ್ನೇ ಮುಂದುವರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.