ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ
ಚಿತ್ರ; ಎಕ್ಸ್
ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಚಿತ್ರಮಂದಿರಗಳಲ್ಲಿ ನವೆಂಬರ್ 7ರಂದು ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು, ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಸಾಧ್ಯವಾಗದವರು ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.
ನವೆಂಬರ್ 7ರಂದು ಬಿಡುಗಡೆಯಾಗಿದ್ದ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರೇಕ್ಷಕರಿಂದ ಹಾಗೂ ಸಿನಿಮಾ ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ರಶ್ಮಿಕಾ ಮಂದಣ್ಣ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು.
ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡ ನಿರೂಪಣೆ ಮತ್ತು ರಶ್ಮಿಕಾ ಅವರ ಅತ್ಯುತ್ತಮ ಅಭಿನಯದ ಮೂಲಕ ಈ ಚಿತ್ರ ಪ್ರೇಕ್ಷಕರನ್ನು ಸೆಳೆದಿತ್ತು. ಇದೀಗ ಚಿತ್ರದ ಒಟಿಟಿ ಪ್ರಸಾರದ ಹಕ್ಕನ್ನು ‘ನೆಟ್‌ಫ್ಲಿಕ್ಸ್’ ಪಡೆದುಕೊಂಡಿದ್ದು, ಇಂದಿನಿಂದ (ಡಿಸೆಂಬರ್ 5) ಸ್ಟ್ರೀಮಿಂಗ್ ಆಗಲಿ. ಒಟಿಟಿ ವೇದಿಕೆಯಲ್ಲಿ ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.
ರಾಹುಲ್ ರವೀಂದ್ರನ್ ನಿರ್ದೇಶನದ ‘ದಿ ಗರ್ಲ್‌ಫ್ರೆಂಡ್‘ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರೆ, ದೀಕ್ಷಿತ್ ಶೆಟ್ಟಿ ನಾಯಕನಾಗಿದ್ದಾರೆ. ಅನು ಎಮ್ಯಾನುಯೆಲ್ ಮತ್ತು ರಾವ್ ರಮೇಶ್‌ರಂತಹ ನಟರು ಸಿನಿಮಾದ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಕಥೆ ಭೂಮಾ ದೇವಿ (ರಶ್ಮಿಕಾ ಮಂದಣ್ಣ) ಎಂಬ ಯುವತಿಯ ಮೇಲೆ ಕಥೆ ಕೇಂದ್ರೀಕೃತವಾಗಿದ್ದು, ಅವಳ ಪ್ರೀತಿಯ ಸಂಬಂಧ ಹೇಗಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಮಯ ಕಳೆದಂತೆ ಆಕೆಯ ಒಳಗಿನ ಪ್ರೀತಿ ಹಾಗೂ ಭಾವನಾತ್ಮಕ ಒತ್ತಡದಿಂದ ನಿಯಂತ್ರಣ ಕಳೆದುಕೊಳ್ಳುವುದು ಮತ್ತು ನಡವಳಿಕೆ ಬದಲಾವಣೆ ಮಾಡಿಕೊಳ್ಳುವುದನ್ನು ಕಾಣಬಹುದು. ಕ್ರಮೇಣ ಪ್ರೀತಿ ಆಕೆಯ ಮಾನಸಿಕ ನೆಮ್ಮದಿ ಮೇಲೆ ಬೀರುವ ಪರಿಣಾಮವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಪ್ರೀತಿಯಿಂದ ಪ್ರಾರಂಭವಾಗುವ ಒಂದು ಉತ್ತಮ ಸಂಬಂಧವು ನಿಧಾನವಾಗಿ ಹೇಗೆ ಹದಗೆಡುತ್ತದೆ. ಇದದನ್ನು ಭೂಮಾ ಹೇಗೆ ಎದುರಿಸುತ್ತಾಳೆ ಎಂಬುದನ್ನು 'ದಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.