ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ, ಮೂರು ಹೊಸ ಸಿನಿಮಾಗಳ ಘೋಷಣೆಯನ್ನು ವಿಭಿನ್ನವಾಗಿ ಕನ್ನಡದ ಪ್ರೇಕ್ಷಕರ ಎದುರಿಗೆ ಇಟ್ಟಿದ್ದಾರೆ. ಇದು ತಮ್ಮ ಜನ್ಮದಿನದ ಕೊಡುಗೆ ಎಂದಿದ್ದಾರೆ.
ರವಿಚಂದ್ರನ್ ನಟನೆಯ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಕನ್ನಡಿಗ’ ಚಿತ್ರದ ಟೀಸರ್ ಮೇ 30ರಂದು ಬಿಡುಗಡೆಯಾಗಿತ್ತು. ಇದರಲ್ಲಿ ಲಿಪಿಕಾರನ ಪಾತ್ರಕ್ಕೆ ಬಣ್ಣಹಚ್ಚಿರುವ ರವಿಚಂದ್ರನ್, ಗಿರಿಜಾ ಮೀಸೆ ಹಾಗೂ ಮುಂಡಾಸು ಧರಿಸಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ದಿನದಂದು ತಮ್ಮ 1n1ly ಯೂಟ್ಯೂಬ್ ಚಾನೆಲ್ ಮುಖಾಂತರ ರವಿಚಂದ್ರನ್ ಹೊಸ ಸಿನಿಮಾಗಳ ಕನಸು ಬಿಚ್ಚಿಟ್ಟಿದ್ದಾರೆ. 8 ನಿಮಿಷಗಳ ಒಂದೇ ವಿಡಿಯೊದಲ್ಲಿ ‘ಗಾಡ್’, ‘6T’ ಹಾಗೂ ‘ಬ್ಯಾಡ್‌ಬಾಯ್ಸ್’ ಹೀಗೆ ಮೂರು ಚಿತ್ರಗಳ ಝಲಕ್ ನೀಡಿದ್ದಾರೆ. ಈಗಾಗಲೇ ‘ಕನ್ನಡಿಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪಾವನಾ ಗೌಡ, ‘6T–ಲಿವಿಂಗ್ ವಿದ್ ದಿ ಪಾಸ್ಟ್’ ಚಿತ್ರದಲ್ಲೂ ಗ್ಲ್ಯಾಮರಸ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ‘ಬ್ಯಾಡ್‌ಬಾಯ್ಸ್’ ಚಿತ್ರದಲ್ಲಿ ರವಿಚಂದ್ರನ್ ಪುತ್ರರಾದ ಮನೋರಂಜನ್ ಹಾಗೂ ವಿಕ್ರಮ್ ಕೂಡಾ ಕಾಣಿಸಿಕೊಂಡಿದ್ದಾರೆ.
ನಟನೆ ಜೊತೆ ನಿರ್ದೇಶನದಲ್ಲೂ ಯಶಸ್ಸು ಕಂಡಿರುವ ರವಿಚಂದ್ರನ್, ಸದ್ಯ ‘ರವಿ ಬೋಪಣ್ಣ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ಸುದೀಪ್ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾಗಿ ಚಿತ್ರಮಂದಿರಗಳು ತೆರೆದರೆ, ‘ಕನ್ನಡಿಗ’ ಹಾಗೂ ‘ರವಿ ಬೋಪಣ್ಣ’ ಚಿತ್ರವು ಇದೇ ವರ್ಷ ತೆರೆ ಕಾಣುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.