ADVERTISEMENT

ಶಂಕರನಾಗ್‌ ಚಿತ್ರಮಂದಿರಕ್ಕೆ ಮರುಜೀವ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:00 IST
Last Updated 25 ಏಪ್ರಿಲ್ 2019, 20:00 IST
ಶಂಕರ್‌ನಾಗ್ ಥಿಯೇಟರ್ –ಪ್ರಜಾವಾಣಿ ಚಿತ್ರ -ಕೃಷ್ಣಕುಮಾರ್ ಪಿಎಸ್ 
ಶಂಕರ್‌ನಾಗ್ ಥಿಯೇಟರ್ –ಪ್ರಜಾವಾಣಿ ಚಿತ್ರ -ಕೃಷ್ಣಕುಮಾರ್ ಪಿಎಸ್    

ಎಂ. ಜಿ. ರಸ್ತೆಯ ಶಂಕರನಾಗ್‌ ಚಿತ್ರಮಂದಿರದಲ್ಲಿ ಇದೀಗ ವಿಶ್ವದ ಬೃಹತ್‌ ಡಿಜಿಟಲ್‌ ಸ್ಕ್ರೀನ್‌ ಮೇಲೆ ಸಿನಿಮಾಗಳು ಮೂಡಿಬರಲಿವೆ. ಬಹು ಸಮಯದಿಂದ ಮುಚ್ಚಿದ್ದ ಈ ಚಿತ್ರಮಂದಿರಕ್ಕೆ ಇದರಿಂದ ಮರುಜೀವ ಬಂದಂತಾಗಿದೆ. ಇದನ್ನು ಇನ್ನು ಮುಂದೆ ‘ಶಂಕರನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್’ ಎಂದು ಗುರುತಿಸಲಾಗುವುದು.

ಸಿನಿಮಾ ತಂತ್ರಜ್ಞಾನದಲ್ಲಿ ಏನೆಲ್ಲಾ ಕ್ರಾಂತಿಕಾರಿ ಬದಲಾವಣೆಗಳಾದರೂ ಪ್ರೊಜೆಕ್ಟರ್‌ ಮತ್ತು ಪರದೆಗಳು ಮಾತ್ರ ಬದಲಾಗಿರಲಿಲ್ಲ. ಇದೀಗ ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಇದೇ ಮೊದಲ ಬಾರಿಗೆ ಪ್ರೊಜೆಕ್ಟರ್‌ ನೆರವಿಲ್ಲದೆ ಚಿತ್ರ ಪ್ರದರ್ಶಿಸಬಹುದಾದ ದೊಡ್ಡ ಗಾತ್ರದ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ.

ಚಿತ್ರಮಂದಿರದಲ್ಲಿ ಈ ಮೊದಲಿದ್ದ ಸಾಂಪ್ರದಾಯಿಕ ಪರದೆಯ ಜಾಗದಲ್ಲಿ 14 ಮೀಟರ್‌ ಎಲ್‌ಇಡಿ ಪರದೆ ಹಾಕಲಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಓನಿಕ್ಸ್‌ ಸಿನಿಮಾ ಎಲ್‌ಇಡಿ ಪರದೆ ಇದಾಗಿದೆ.

ADVERTISEMENT

614 ಆಸನಗಳ ಸ್ವಾಗತ್‌ ಓನಿಕ್ಸ್‌ ಥಿಯೇಟರ್ ಎಲ್‌ಇಡಿ ಪರದೆ ಹೊಂದಿರುವ ಅತ್ಯಂತ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮಲೇಷ್ಯಾ ಮತ್ತು ಚೀನಾ ಚಿತ್ರಮಂದಿರದಲ್ಲಿಯೂ ಕೂಡ ಇದೇ ಗಾತ್ರದ ಎರಡು ಪರದೆಗಳನ್ನು ಅಳವಡಿಸಲಾಗಿದೆ. ಅದನ್ನು ಹೊರತುಪಡಿಸಿದರೆ ಅಷ್ಟು ದೊಡ್ಡ ಎಲ್‌ಇಡಿ ಪರದೆ ಇರುವುದು ಬೆಂಗಳೂರಿನಲ್ಲಿ ಮಾತ್ರ. ದೆಹಲಿಯ ಸಿನಿಪೊಲೀಸ್‌ ಮತ್ತು ಮುಂಬೈನ ಐನಾಕ್ಸ್‌ ಚಿತ್ರಮಂದಿರಗಳಲ್ಲಿ ಇದಕ್ಕಿಂತ ಚಿಕ್ಕ ಪರದೆಗಳಿವೆ.

ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ಸಂಗ್‌ ಕಂಪನಿಯು ಈ ಎಲ್‌ಇಡಿ ಪರದೆಯನ್ನು ತಯಾರಿಸಿದೆ. ಜೆಬಿಎಲ್‌ ಸ್ಪೀಕರ್‌ ಮತ್ತು ಹೆಡ್‌ಫೋನ್‌ಗಳಿಂದ ಹೆಸರುವಾಸಿಯಾಗಿರುವಹರ್ಮನ್‌ ಸಮೂಹ ಸಂಸ್ಥೆಯು ಚಿತ್ರಮಂದಿರದ ಧ್ವನಿ ವ್ಯವಸ್ಥೆಯ ಮೇಲುಸ್ತುವಾರಿ ಹೊತ್ತಿದೆ. ಜಾಗತಿಕ ಮಟ್ಟದಲ್ಲಿ ವೃತ್ತಿಪರ ಸಿನಿಮಾ ಲೌಡ್‌ಸ್ಪೀಕರ್‌ ತಯಾರಿಕೆಯಲ್ಲಿ ಹರ್ಮನ್‌ ಮುಂಚೂಣಿಯಲ್ಲಿದೆ.

ಸದ್ಯ ಪರದೆಯ ಹಿಂದುಗಡೆ ಸ್ಪೀಕರ್‌ಗಳಿರುತ್ತವೆ. ಹೊಸ ಧ್ವನಿ ವ್ಯವಸ್ಥೆಯಲ್ಲಿ ಪರದೆಯ ಮೇಲೆ ಸ್ಪೀಕರ್‌ ಅಳವಡಿಸಲಾಗಿದೆ. ಸ್ಕಲ್ಪಟೆಡ್‌ ಧ್ವನಿ ತಂತ್ರಜ್ಞಾನ ಚಿತ್ರ ಮಂದಿರದ ಮೂಲೆ, ಮೂಲೆಗಳಿಗೂ ಸಮಾಂತರವಾಗಿ ಮತ್ತು ಸ್ಪಷ್ಟವಾಗಿ ಧ್ವನಿಯನ್ನು ರವಾನಿಸುತ್ತದೆ.

ಒನಿಕ್ಸ್‌ ಎಂದರೆ ಕಡುಗಪ್ಪು ಕಲ್ಲು. ಅಂದರೆ ಬಣ್ಣಗಳ ಸ್ಪಷ್ಟತೆಯನ್ನು ಇದು ಸಾಂಕೇತಿಸುತ್ತದೆ. ಇದರರ್ಥ ಓನಿಕ್ಸ್‌ ತಂತ್ರಜ್ಞಾನ ಬಳಕೆಯಿಂದಹೆಚ್ಚು ಸ್ಪಷ್ಟವಾದ ಮತ್ತು ಗುಣಮಟ್ಟದ ಚಿತ್ರಗಳ ಅನುಭವವನ್ನು ಪ್ರೇಕ್ಷಕರಿಗೆ ನೀಡಲು ಸಾಧ್ಯವಾಗಲಿದೆ. ಪೊಜೆಕ್ಟರ್‌ಗಳಲ್ಲಿ ತೋರಿಸುವ ಸಿನಿಮಾಕ್ಕಿಂತ ಹತ್ತು ಪಟ್ಟು ಹೆಚ್ಚು ಸ್ಪಷ್ಟ ಗುಣಮಟ್ಟದ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಚಿತ್ರಮಂದಿರದ ದೀಪಗಳನ್ನು ಆರಿಸದೆ ಬೆಳಕಿನಲ್ಲೂ ಕೂಡ ಚಿತ್ರ ವೀಕ್ಷಿಸಬಹುದಾಗಿದ್ದು, ಈ ತಂತ್ರಜ್ಞಾನದ ವೈಶಿಷ್ಟ್ಯ.

ಚಿತ್ರಮಂದಿರಗಳಿಗೆಪ್ರೇಕ್ಷಕರನ್ನು ಕರೆತರುವುದು ಸವಾಲು: ಎ.ಆರ್. ರೆಹಮಾನ್

ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ಚಿತ್ರಮಂದಿರ ಉದ್ಘಾಟನೆಗೆ ಚೆನ್ನೈನಿಂದ ಬಂದಿದ್ದರು. ಅವರು ಹರ್ಮನ್‌ ಕಂಪೆನಿಯ ರಾಯಭಾರಿಯೂ ಹೌದು.

ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆ ತರುವುದೇ ಚಿತ್ರೋದ್ಯಮದ ಮುಂದಿರುವ ದೊಡ್ಡ ಸವಾಲು.ಎಲ್‌ಇಡಿ ಪರದೆಯಂತಹ ತಂತ್ರಜ್ಞಾನಗಳಿಂದಾದರೂ ಜನರು ಚಿತ್ರಮಂದಿರಗಳಿಗೆ ಬರಬಹುದೇನೋ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರಮಂದಿರಗಳು ಕೂಡ ಗುಣಮಟ್ಟ ಮತ್ತು ನಿರ್ವಹಣೆಯತ್ತ ಗಮನ ಹರಿಸಬೇಕು.ಅಂದಾಗ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಬಹುದು ಎಂದು ಸಂಗೀತ ದಿಗ್ಗಜ ರೆಹಮಾನ್‌ ಕಿವಿಮಾತು ಹೇಳಿದರು.

ಸಂಗೀತದ ಹುಚ್ಚು ಹಿಡಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ದಿನಗಳಲ್ಲಿಜೆಬಿಎಲ್‌ ಸ್ಪೀಕರ್‌ ಖರೀದಿಸುವುದು ತನ್ನ ಮಹತ್ವದ ಕನಸಾಗಿತ್ತು. ಜೇಬಿನಲ್ಲಿ ಹಣವಿರುತ್ತಿರಲಿಲ್ಲ. ಐದಾರು ತಿಂಗಳು ದುಡಿದು ಕೂಡಿಟ್ಟ ಹಣದಿಂದ ಜೆಬಿಎಲ್‌ ಸ್ಪೀಕರ್‌ ಖರೀದಿಸಿದ್ದೆ. ಈಗ ಅದೇ ಕಂಪನಿಯ ರಾಯಭಾರಿಯಾಗಿದ್ದೇನೆ ಎಂದು ಅವರು ಹಿಂದಿನ ದಿನಗಳನ್ನು ಸ್ಮರಿಸಿಕೊಂಡರು.

ಸ್ಯಾಮ್ಸಂಗ್‌ ಇಂಡಿಯಾ ಗ್ರಾಹಕ ವಿದ್ಯುನ್ಮಾನ ವಹಿವಾಟು ವಿಭಾಗದ ಸಾಂಸ್ಥಿಕ ಉಪಾಧ್ಯಕ್ಷ ಮೂನ್‌ ಗೂ ಚಿನ್‌ ಅವರು ಎಲ್‌ಇಡಿ ಪರದೆಯನ್ನು ಅನಾವರಣಗೊಳಿಸಿದರು. ಸಂಸ್ಥೆಯ ಎಂಟರ್‌ಪ್ರೈಸ್‌ ಬಿಸಿನೆಸ್‌ ವಿಭಾಗದ ಉಪಾಧ್ಯಕ್ಷ ಪುನೀತ್‌ ಸೇಠಿ, ಭಾರತ ಮತ್ತು ಸಾರ್ಕ್‌ ರಾಷ್ಟ್ರಗಳ ಹರ್ಮನ್‌ ಸಂಸ್ಥೆಯ ವೃತ್ತಿಪರ ಪರಿಹಾರ ವಿಭಾಗದ ಮುಖ್ಯಸ್ಥ ಪ್ರಶಾಂತ್‌ ಗೋವಿಂದನ್‌, ಸ್ವಾಗತ್‌ ಗ್ರುಪ್‌ ಆಫ್‌ ಸಿನಿಮಾಸ್‌ ನಿರ್ದೇಶಕ ಕಿಶೋರ್‌ ಪಿ. ಸಮಾರಂಭಕ್ಕೆ ಸಾಕ್ಷಿಯಾದರು.

ಎಲ್‌ಇಡಿ ಪರದೆ, ಧ್ವನಿ ವ್ಯವಸ್ಥೆ ವೈಶಿಷ್ಟ್ಯಗಳು

* 3ಡಿ ತಂತ್ರಜ್ಞಾನ ಅಳವಡಿಸಿದ ಎಲ್‌ಇಡಿ ಪರದೆ ಇದಾಗಿದೆ.

* ಪ್ರತಿ ಆಸನಗಳಿಗೂ ಸಮಾನವಾಗಿ ಸಂಗೀತ, ಮಾತುಗಳು ಕೇಳುವಂತೆ ಧ್ವನಿ ವ್ಯವಸ್ಥೆ ರೂಪಿಸಲಾಗಿದೆ.

* ಮೊದಲ ಸಾಲಿನಿಂದ ಕೊನೆಯ ಸಾಲಿನಪ್ರೇಕ್ಷಕರಿಗೂ ಒಂದೇ ರೀತಿಯ ಸಮಾನ ವೀಕ್ಷಣೆ ಅನುಭವ ದೊರೆಯುತ್ತದೆ.

* ಎಚ್‌ಡಿಆರ್‌ ತಂತ್ರಜ್ಞಾನದಿಂದಾಗಿ ಪ್ರೇಕ್ಷಕರು ಗುಣಮಟ್ಟದ ದೃಶ್ಯ, ನೈಜ ಬಣ್ಣಗಳು, ಹೆಚ್ಚು ಸ್ಪಷ್ಟತೆ ಅನುಭವ ಪಡೆಯಬಹುದು

* ಐದು, ಹತ್ತು ಮತ್ತು 14 ಮೀಟರ್‌ ಹೀಗೆ ಮೂರು ಗಾತ್ರಗಳಲ್ಲಿ ಎಲ್‌ಇಡಿ ಪರದೆಗಳು ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.