ADVERTISEMENT

ಕೊನೇ ಕ್ಷಣದವರೆಗೆ ವೈದ್ಯರನ್ನು ರಂಜಿಸಿದ್ದರು: ರಿಷಿ ಕಪೂರ್ ಕುಟುಂಬದ ಪ್ರತಿಕ್ರಿಯೆ

ದೇಶದ ಸಂಕಷ್ಟ ಅರ್ಥ ಮಾಡಿಕೊಳ್ಳಿ | ಕಾನೂನು ಗೌರವಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2020, 5:22 IST
Last Updated 30 ಏಪ್ರಿಲ್ 2020, 5:22 IST
ರಿಷಿ ಕಪೂರ್
ರಿಷಿ ಕಪೂರ್   

ಮುಂಬೈ: ಬಾಲಿವುಡ್‌ನ ಮೇರುನಟ ರಿಷಿ ಕಪೂರ್‌ ತಮ್ಮ ಉಸಿರಿನ ಕೊನೆಯ ಕ್ಷಣದವರೆಗೂ ತಮ್ಮ ಸುತ್ತಲಿದ್ದವರನ್ನು ನಗಿಸಲು ಯತ್ನಿಸಿದ್ದರು ಎಂಬ ಸಂಗತಿಯನ್ನು ಕಪೂರ್‌ ಕುಟುಂಬ ಬಹಿರಂಗಪಡಿಸಿದೆ. ‘ದೇಶದ ಸಂಕಷ್ಟ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಜನರು ಗುಂಪು ಸೇರಲು ಅವಕಾಶವಿಲ್ಲ.ಕಾನೂನು ಗೌರವಿಸಿ’ ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್ (67)‌ ಅವರು ಗುರುವಾರ ಬೆಳಿಗ್ಗೆ ನಿಧನರಾದರು.

ಕುಟುಂಬ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯ ಪೂರ್ಣಪಾಠ ಇದು...

ಲ್ಯುಕೇಮಿಯಾ ಕಾಯಿಲೆಯೊಂದಿಗೆ ಎರಡು ವರ್ಷ ಸುದೀರ್ಘ ಹೋರಾಡಿದ ನಂತರ ನಮ್ಮ ಆಪ್ತರಾದ ರಿಷಿ ಕಪೂರ್ ಅವರು ಇಂದು ಮುಂಜಾನೆ 8.45ಕ್ಕೆ ಶಾಂತರಾಗಿ ನಿಧನರಾದರು. ಕೊನೆಯ ಉಸಿರಿನವರೆಗೂ ರಿಷಿ ನಮ್ಮನ್ನು ರಂಜಿಸಿದರು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಪ್ರತಿಕ್ರಿಯಿಸಿದರು.

ಅತ್ಯಂತ ಸ್ನೇಹಪರರಾಗಿದ್ದ ಅವರು ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂಬ ಮನಃಸ್ಥಿತಿ ಹೊಂದಿದ್ದರು. ಎರಡು ಖಂಡಗಳಲ್ಲಿ ಚಿಕಿತ್ಸೆ ಪಡೆದುಕೊಂಡರು. ಚಿಕಿತ್ಸೆಯ ಅವಧಿಯಲ್ಲಾಗಲಿ, ರೋಗ ಬಾಧೆಯಾಗಲಿ ತಮ್ಮ ಉತ್ಸಾಹ ಕಿತ್ತುಕೊಳ್ಳಲು ರಿಷಿ ಅವಕಾಶ ಮಾಡಿಕೊಡಲಿಲ್ಲ. ಕುಟುಂಬ, ಗೆಳೆಯರು, ಆಹಾರ ಮತ್ತು ಚಲನಚಿತ್ರಗಳು ಅವರ ಗಮನದ ಕೇಂದ್ರವಾಗಿದ್ದವು. ಕಾಯಿಲೆಯ ಅವಧಿಯಲ್ಲಿ ರಿಷಿಯನ್ನು ಭೇಟಿಯಾದವರೆಲ್ಲರೂ ಅವರ ಉತ್ಸಾಹ ಕಂಡು ಅಚ್ಚರಿಪಡುತ್ತಿದ್ದರು.

ವಿಶ್ವದ ವಿವಿಧೆಡೆಗಳಿಂದ ಅಭಿಮಾನಿಗಳು ಸುರಿಸಿದ ಪ್ರೀತಿಗೆ ರಿಷಿ ಅಭಾರಿಯಾಗಿದ್ದರು. ತಮ್ಮನ್ನು ಅಭಿಮಾನಿಗಳು ಸದಾ ನಗುವಾಗಿ ನೆನಪಿಡಬೇಕು, ಕಣ್ಣೀರಾಗಿ ಅಲ್ಲ ಎನ್ನುವುದು ಅವರ ಆಸೆಯಾಗಿತ್ತು. ಇದು ಅವರ ಅಭಿಮಾನಿಗಳೆಲ್ಲರಿಗೂ ಗೊತ್ತಿದೆ.

ವೈಯಕ್ತಿಕವಾಗಿ ನಮ್ಮ ಕುಟುಂಬಕ್ಕೆ ಇದು ಅತಿದೊಡ್ಡ ನಷ್ಟ. ಆದರೆ ಜಗತ್ತು ಇಂದು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಜನರು ಸೇರುವುದಕ್ಕೆ ಹಲವು ನಿರ್ಬಂಧಗಳಿವೆ. ಎಲ್ಲ ಅಭಿಮಾನಿಗಳು, ಗೆಳೆಯರು ಮತ್ತು ಹಿತೈಷಿಗಳು ನೆಲದ ಕಾನೂನನ್ನು ಮೊದಲು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ.

ರಿಷಿ ಕಪೂರ್‌ಗೂ ಕಾನೂನು ಗೌರವಿಸುದು ಅತ್ಯಂತ ಇಷ್ಟದ ಕೆಲಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.