ADVERTISEMENT

ಇಲ್ಯೂಷನರಿ ಜಗತ್ತಿನಲ್ಲಿ ರಿಯಲಿಸ್ಟಿಕ್‌ ಆಗುವುದೇ ನಟನೆ

ನಟ ರಿಷಿ ಸಂದರ್ಶನ

ಪದ್ಮನಾಭ ಭಟ್ಟ‌
Published 1 ಡಿಸೆಂಬರ್ 2018, 9:00 IST
Last Updated 1 ಡಿಸೆಂಬರ್ 2018, 9:00 IST
ರಿಷಿ
ರಿಷಿ   

‘ಆಪರೇಷನ್ ಅಲಮೇಲಮ್ಮ’ ಚಿತ್ರದ ಪರ್ಮಿ ಪಾತ್ರವನ್ನು ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದಿದೆ. ಈ ಚಿತ್ರದ ಯಶಸ್ಸು ಪರ್ಮಿ ಪಾತ್ರಧಾರಿ ರಿಷಿ ಅವರ ವೃತ್ತಿಬದುಕಿನ ನಕ್ಷೆಯನ್ನು ಬದಲಿಸಿದೆ. ಅವರ ಕೈಯಲ್ಲೀಗ ಹಲವು ಅವಕಾಶಗಳಿವೆ. ರಂಗಭೂಮಿ ಹಿನ್ನೆಲೆಯ ರಿಷಿಗೆ ಸಾಲು ಸಾಲು ಅವಕಾಶಗಳಲ್ಲಿ ಒಳ್ಳೆಯದನ್ನು ಆಯ್ದುಕೊಳ್ಳುವ ಜಾಣ್ಮೆಯೂ ಇದೆ. ಪುನೀತ್ ರಾಜ್‌ಕುಮಾರ್‌ ನಿರ್ಮಾಣದ, ಹೇಮಂತ್ ಕುಮಾರ್ ನಿರ್ದೇಶನದ ‘ಕವಲು ದಾರಿ’ ಚಿತ್ರದ ನಾಯಕ ರಿಷಿ. ಅದಾದ ಮೇಲೆ ಅವರು ಜೇಕಬ್‌ ವರ್ಗೀಸ್‌ ನಿರ್ಮಾಣದ ಇನ್ನೊಂದು ಸಿನಿಮಾ ಒಪ್ಪಿಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಅದರ ಶೀರ್ಷಿಕೆ ಇನ್ನೂ ಇಟ್ಟಿಲ್ಲ. ಸದ್ಯಕ್ಕೆ ‘ಗುಲ್ಟು’ ಚಿತ್ರತಂಡ ರೂಪಿಸುತ್ತಿರುವ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಎಂಬ ಚಿತ್ರದ ಚಿತ್ರೀಕರಣದಲ್ಲಿ ಅವರು ತೊಡಗಿಕೊಂಡಿದ್ದಾರೆ. ವಿನಯ್‌ ಮತ್ತು ವಿಕಾಸ್‌ ಸಹೋದರರು ನಿರ್ದೇಶಿಸುತ್ತಿರುವ ‘ರಾಮನ ಅವತಾರ’ ಎಂಬ ಚಿತ್ರದಲ್ಲಿ ಅವರು ಡ್ಯಾನಿಶ್ ಶೇಠ್‌ ಮತ್ತು ರಾಜ್‌ ಬಿ. ಶೆಟ್ಟಿ ಅವರ ಜತೆಗೆ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ನನಗೆ ತುಂಬ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಹಪಹಪಿ ಇಲ್ಲ. ನಾನು ನಟಿಸಿದ ಸಿನಿಮಾಗಳು ಇನ್ನು ಐದು–ಹತ್ತು ವರ್ಷಗಳ ನಂತರವೂ ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗಿರಬೇಕು ಎನ್ನುವ’ ರಿಷಿ ‘ಚಿತ್ರಸುಧಾ’ಕ್ಕೆ ನೀಡಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.

* ಆಪರೇಷನ್ ಅಲಮೇಲಮ್ಮ ನಂತರ ಬದುಕು ಹೇಗಾಯ್ತು?

ADVERTISEMENT

ಒಂದು ಸಿನಿಮಾ ಹಿಟ್‌ ಆದಂತೆಯೇ ನಟನ ಮುಂದೆ ಹಲವು ದಾರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಆ ಚಿತ್ರದ ಪರ್ಮಿ ಪಾತ್ರವನ್ನು ಜನ ಇಷ್ಟಪಟ್ಟರು. ಅದು ನನಗೆ ವರದಾನವಾಯ್ತು. ಅವಕಾಶಗಳು ಸಿಗುತ್ತಾ ಹೋದವು.

* ಒಂದು ಸಿನಿಮಾ ‘ಒಳ್ಳೆಯ ಸಿನಿಮಾ ಆಗುತ್ತದೆ’ ಎಂದು ನಿಮಗೆ ಯಾವಾಗ ಅನಿಸುತ್ತದೆ?

ನಾನು ಸಿನಿಮಾ ಕಥೆ ಕೇಳಿದಾಗ, ಸ್ಕ್ರಿಪ್ಟ್‌ ಓದಿದಾಗ ಅದು ನನಗೆ ಎಷ್ಟು ಇಷ್ಟವಾಯ್ತು ಎನ್ನುವುದು ಮುಖ್ಯ. ಆ ಕಥೆಯನ್ನು ಜನರು ಇಷ್ಟಪಡಬಹುದು ಎಂದು ನನಗೆ ಅನಿಸಿದ ಮೇಲೆ ಆ ಕಥೆಯನ್ನು ಯಾರು ನಿರ್ದೇಶಿಸುತ್ತಿದ್ದಾರೆ, ಯಾರು ನಿರ್ಮಾಣ ಮಾಡುತ್ತಿದ್ದಾರೆ ಎಂದೆಲ್ಲ ನೋಡುತ್ತೇನೆ.

* ಒಬ್ಬ ನಟನ ಇಮೇಜ್‌, ಮಾರುಕಟ್ಟೆಯ ಎಷ್ಟೋ ಅಂಶಗಳು ಸಿನಿಮಾವನ್ನು ನಿರ್ಧರಿಸುತ್ತವಲ್ಲವೇ?

ನಿಜ. ನಾನು ಹಿಂದೆ ನಾಟಕಗಳನ್ನು ಮಾಡಿದ್ದೀನಿ. ಧಾರಾವಾಹಿಗಳಲ್ಲಿ ನಟಿಸಿದ್ದೀನಿ. ಆದರೆ ಅಲ್ಲಿ ಯಾವುದೇ ರೀತಿಯ ಆರ್ಥಿಕ ಒತ್ತಡ ಇರುತ್ತಿರಲಿಲ್ಲ. ನಾಟಕ ಹೌಸ್‌ಫುಲ್ ಆಗಿಲ್ಲ ಎಂದರೆ,ಧಾರಾವಾಹಿ ಟಿಆರ್‌‍ಪಿ ಕೆಳಗೆ ಬಂದರೆ ಅದರ ಹೊರೆ ನನ್ನ ತಲೆಮೇಲೆ ಇರುತ್ತಿರಲಿಲ್ಲ. ಆದರೆ ಸಿನಿಮಾದಲ್ಲಿ ಹಾಗಲ್ಲ. ಸಿನಿಮಾ ಹಣ ಮಾಡಿಲ್ಲ ಎಂದರೆ ಮೊದಲ ಏಟು ಬೀಳೋದು ನಿರ್ಮಾಪಕರಿಗೆ. ನಂತರ ನಟರ ಇಮೇಜ್‌ಗೆ ಧಕ್ಕೆಯಾಗುತ್ತದೆ. ಹಾಗಾಗಿ ಹೀರೊ ಮೇಲೆ ಆರ್ಥಿಕ ಒತ್ತಡ ಇರುತ್ತದೆ.

ಎಷ್ಟೋ ಸಿನಿಮಾಗಳ ಸ್ಕ್ರಿಪ್ಟ್‌ ಚೆನ್ನಾಗಿರುತ್ತದೆ. ಆದರೆ ಕಮರ್ಷಿಯಲಿ ಇದು ವರ್ಕೌಟ್ ಆಗಲ್ಲ ಅಂತ ಗೊತ್ತಿರುತ್ತದೆ. ಅದರರ್ಥ ಅಂಥ ಸಿನಿಮಾಗಳನ್ನು ಮಾಡಬಾರದು ಎಂದಲ್ಲ. ನಾನೂ ಅಂಥ ಸಿನಿಮಾಗಳಲ್ಲಿ ನಟಿಸುತ್ತೇನೆ. ಅದರಲ್ಲಿಯೂ ನಿರ್ಮಾಪಕರಿಗೆ ಹೊರೆ ಆಗದಂತೆ ಪ್ರಯತ್ನಿಸುವುದು ನಮ್ಮ ಕರ್ತವ್ಯ.

* ನಟನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಸಿನಿಮಾ ಅಂದರೆ ಒಂದು ಇಲ್ಯೂಷನ್‌. ತೆರೆಯ ಮೇಲೆ ಸೃಷ್ಟಿಯಾಗುವ ಒಂದು ಇಲ್ಯೂಷನರಿ ಜಗತ್ತಿನಲ್ಲಿ, ಒಂದು ಇಲ್ಯೂಷನರಿ ಪಾತ್ರ ಇಟ್ಟುಕೊಂಡು ನಾನು ಎಷ್ಟು ರಿಯಲಿಸ್ಟಿಕ್‌ ಆಗಿ ಅಭಿವ್ಯಕ್ತಗೊಳ್ಳಬಹುದು ಎನ್ನುವುದೇ ನಟನೆ. ಹಾಗೆ ರಿಯಲ್‌ ಆಗುವುದು ನಟನಿಗೆ ಯಾವಾಗಲೂ ಇರುವ ಸವಾಲು.

* ನಿರ್ದೇಶನ ಮಾಡುವ ಕನಸು ಇದೆಯಾ?

ನಿರ್ದೇಶಕ ಸಿನಿಮಾದ ಎಲ್ಲದಕ್ಕೂ ಜವಾಬ್ದಾರ ಆಗಬೇಕಾಗುತ್ತದೆ. ಅದು ತುಂಬ ಕಷ್ಟದ ಕೆಲಸ. ಸದ್ಯಕ್ಕಂತೂ ನಿರ್ದೇಶನಕ್ಕಿಳಿಯುವ ಆಸೆ ಇಲ್ಲ. ಆದರೆ ನನ್ನೊಳಗೆ ಒಬ್ಬ ನಿರ್ದೇಶಕನಾಗಿ ಚಿಂತಿಸುವ ಕಾಣ್ಕೆ ಇದೆಯೇನೋ ಎಂದೂ ಅನಿಸಿದೆ. ಅದು ಯಾವಾಗ ಹೊರಗೆ ಬರುತ್ತೆದೆಯೋ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.