ADVERTISEMENT

RRR ಚಿತ್ರದ ದೃಶ್ಯ ಸೋರಿಕೆ: ನಿರ್ದೇಶಕ ರಾಜಮೌಳಿಗೆ ತಲೆನೋವು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 9:16 IST
Last Updated 30 ಜನವರಿ 2020, 9:16 IST
ರಾಮ್‌ಚರಣ್‌, ಅಜಯ್‌ ದೇವಗನ್‌, ಜೂನಿಯರ್‌ ಎನ್‌ಟಿಆರ್‌ ಮತ್ತು ಎಸ್‌.ಎಸ್. ರಾಜಮೌಳಿ
ರಾಮ್‌ಚರಣ್‌, ಅಜಯ್‌ ದೇವಗನ್‌, ಜೂನಿಯರ್‌ ಎನ್‌ಟಿಆರ್‌ ಮತ್ತು ಎಸ್‌.ಎಸ್. ರಾಜಮೌಳಿ   

‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ಎಸ್‌.ಎಸ್. ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ‘ಆರ್‌ಆರ್‌ಆರ್‌’. ಈ ಚಿತ್ರದ ಕಥೆ ಬರೆದಿರುವುದು ಕೆ.ವಿ. ವಿಜಯೇಂದ್ರಪ್ರಸಾದ್‌. 10 ಭಾಷೆಗಳಲ್ಲಿ ಇದು ಬಿಡುಗಡೆಯಾಗಲಿದ್ದು, ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

ಇತ್ತೀಚೆಗೆ ಬಾಲಿವುಡ್ ನಟ ಅಜಯ್‌ ದೇವಗನ್‌ ಅವರು ರಾಜಮೌಳಿ ಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಶ್ರಿಯಾ ಶರಣ್ ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಚಿತ್ರದ ಶೂಟಿಂಗ್‌ ಅಂತಿಮಘಟ್ಟ ತಲುಪಿದ್ದು, ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈಗ ರಾಜಮೌಳಿ ಅವರಿಗೆ ಚಿತ್ರದ ವಿಡಿಯೊಗಳು ಸೋರಿಕೆಯಾಗುತ್ತಿರುವುದು ತಲೆನೋವು ತಂದಿದೆ. ಮುಖ್ಯ ಪಾತ್ರದಲ್ಲಿ ನಟಿಸಿರುವ ಜೂನಿಯರ್‌ ಎನ್‌ಟಿಆರ್ ಅವರನ್ನು ಪರಿಚರಿಸುವ ದೃಶ್ಯಗಳು ಸೋರಿಕೆಯಾಗಿವೆ. ಬುಡಕಟ್ಟು ವೇಷಧಾರಿಯಾಗಿರುವ ಅವರು ಕಾಡುಪ್ರಾಣಿಗಳೊಟ್ಟಿಗೆ ಹೋರಾಟ ನಡೆಸುತ್ತಿರುವ ದೃಶ್ಯಗಳನ್ನು ಸೋರಿಕೆ ಮಾಡಿದವರು ಯಾರೆಂದು ರಾಜಮೌಳಿ ತನಿಖೆಗೆ ಇಳಿದಿದ್ದಾರೆ.

ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಈ ದೃಶ್ಯಗಳಿಗೆ ಕಡಿವಾಣ ಹಾಕಲು ಅವರಿಗೆ ಸಾಧ್ಯವಾಗಿಲ್ಲ. ಚಿತ್ರದ ಎಡಿಟಿಂಗ್‌ ತಂಡದ ವಿರುದ್ಧ ಅವರು ಗರಂ ಆಗಿದ್ದಾರೆ. ಇಡೀ ತಂಡವನ್ನೇ ಬದಲಾಯಿಸುವ ಆಲೋಚನೆಯಲ್ಲಿಯೂ ಇದ್ದಾರಂತೆ.

ವಿಡಿಯೊ ಸೋರಿಕೆಯಿಂದ ಎಚ್ಚೆತ್ತುಕೊಂಡಿರುವ ಅವರು ಚಿತ್ರೀಕರಣದ ಸೆಟ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಎಡಿಟಿಂಗ್‌ ಕೊಠಡಿಯ ಮೇಲೂ ನಿಗಾವಹಿಸಿದ್ದಾರಂತೆ. ಯಾರೊಬ್ಬರು ಸೆಟ್‌ಗೆ ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ‘ಮಗಧೀರ’ ಮತ್ತು ‘ಈಗ’ ಚಿತ್ರದ ಶೂಟಿಂಗ್‌ ವೇಳೆಯೂ ಅವರು ಇಂತಹದ್ದೇ ಸಮಸ್ಯೆ ಎದುರಿಸಿದ್ದರು.

‘ಆರ್‌ಆರ್‌ಆರ್‌’ ಪಿಡಿಯಾಡಿಕ್‌ ಕಥನ. ರಾಮ್‌ ಚರಣ್‌ ಅಲ್ಲುರಿ ಸೀತಾರಾಮರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ಅವರ ಪಾತ್ರದ ಹೆಸರು ಕೋಮರಾಮ ಭೀಮ. ಡಿ.ವಿ.ವಿ. ಎಂಟರ್‌ಟೈನ್‌ಮೆಂಟ್‌ನಡಿ ಇದಕ್ಕೆ ಬಂಡವಾಳ ಹೂಡಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಕೆ.ಕೆ. ಸೆಂಥಿಲ್‌ಕುಮಾರ್‌ ಅವರ ಛಾಯಾಗ್ರಹಣವಿದೆ. ಜುಲೈಗೆ ಈ ಚಿತ್ರ ತೆರೆಕಾಣುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.