ADVERTISEMENT

RRR ಯಶಸ್ಸಿನ ಪರಿಣಾಮ: ರಾಜಮೌಳಿ ಜೊತೆ ಒಪ್ಪಂದ ಮಾಡಿಕೊಂಡ ಹಾಲಿವುಡ್ ಏಜೆನ್ಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2022, 10:17 IST
Last Updated 23 ಸೆಪ್ಟೆಂಬರ್ 2022, 10:17 IST
ಎಸ್‌.ಎಸ್‌. ರಾಜಮೌಳಿ
ಎಸ್‌.ಎಸ್‌. ರಾಜಮೌಳಿ   

ನವದೆಹಲಿ: ಭಾರತದ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರೊಂದಿಗೆ ಅಮೆರಿಕದ ಕ್ರಿಯೆಟಿವ್‌ ಆರ್ಟಿಸ್ಟ್‌ ಏಜೆನ್ಸಿ (ಸಿಎಎ) ಒಪ್ಪಂದ ಮಾಡಿಕೊಂಡಿದೆ.

'ಕ್ಷಿಪ್ರ ಬೆಳವಣಿಗೆಯೊಂದರಲ್ಲಿ, ಭಾರತದ ಬೇಡಿಕೆಯ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರೊಂದಿಗೆ ಸಿಎಎ ಒಪ್ಪಂದ ಮಾಡಿಕೊಂಡಿದೆ' ಎಂದು ಡೆಡ್‌ಲೈನ್‌ ವರದಿ ಮಾಡಿದೆ.

ರಾಜಮೌಳಿ ನಿರ್ದೇಶನದ'ಆರ್‌ಆರ್‌ಆರ್‌' ಸಿನಿಮಾ ಈ ವರ್ಷದ ಮಾರ್ಚ್‌ 24ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸತತ 10 ವಾರ ಟ್ರೆಂಡ್‌ ಸೃಷ್ಟಿಸಿದ್ದ ಇಂಗ್ಲಿಷ್‌ಯೇತರ ಭಾಷೆಯ ಸಿನಿಮಾ ಎಂಬ ಹೆಗ್ಗಳಿಕೆಗೂ ಭಾಜನವಾಗಿತ್ತು.

ADVERTISEMENT

ಈ ಸಿನಿಮಾದಲ್ಲಿ ದೇಶದ ಇಬ್ಬರು ಕ್ರಾಂತಿಕಾರಿ ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೊಮರಾಮ್‌ ಭೀಮ ಅವರ ಪಾತ್ರಗಳನ್ನು ಜೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌ ನಿಭಾಯಿಸಿದ್ದರು. ಬಾಲಿವುಡ್‌ ನಟರಾದ ಅಜಯ್‌ ದೇವಗನ್‌ ಹಾಗೂ ಆಲಿಯಾ ಭಟ್‌ ಸಹ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

'ಆರ್‌ಆರ್‌ಆರ್‌'ಗೂ ಮುನ್ನ ರಾಜಮೌಳಿ ನಿರ್ದೇಶಿಸಿದ್ದ, ಬಾಹುಬಲಿ ಚಾಪ್ಟರ್‌–1 ಹಾಗೂಚಾಪ್ಟರ್‌–2 ಸಹ ಭಾರಿ ಗಳಿಕೆ ಕಂಡಿದ್ದವು.

ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಾಯಕಿಯಾಗಿಪೂಜಾ ಹೆಗ್ಡೆ ಅಭಿನಯಿಸಲಿದ್ದಾರೆ.

ಸಿಎಎಗೆ ರಾಜಮೌಳಿ ಸಹಿ ಹಾಕಿರುವುದು ಹಾಲಿವುಡ್‌ ಏಜೆನ್ಸಿಗಳಿಗೆ ಭಾರತದತ್ತ ಒಲವು ಹೆಚ್ಚುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದು ಡೆಡ್‌ಲೈನ್‌ ವರದಿಯಲ್ಲಿ ಉಲ್ಲೇಖಿಸಿದೆ. ಕಳೆದ ವರ್ಷ ದೀಪಿಕಾ ಪಡುಕೋಣೆ ಅವರು ಇಂಟರ್‌ನ್ಯಾಷನಲ್ ಕ್ರಿಯೆಟಿವ್ ಮ್ಯಾನೇಜ್‌ಮೆಂಟ್‌ (ಐಸಿಎಂ) ಹಾಗೂ ಆಲಿಯಾ ಭಟ್‌ವಿಲ್ಲಿಯಂ ಮೋರಿಸ್‌ ಎಂಡೀವೌರ್‌ (ಡಬ್ಲ್ಯುಎಂಇ) ಎಜೆನ್ಸಿಗೆ ಸಹಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.