ADVERTISEMENT

‘ರುದ್ರಪ್ರಯಾಗ’ಕ್ಕೂ ನರಭಕ್ಷಕನಿಗೂ ಸಂಬಂಧ ಇದೆಯಾ?!

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 19:30 IST
Last Updated 3 ಜೂನ್ 2020, 19:30 IST
ರುದ್ರಪ್ರಯಾಗ ಚಿತ್ರದ ‍ಪೋಸ್ಟರ್
ರುದ್ರಪ್ರಯಾಗ ಚಿತ್ರದ ‍ಪೋಸ್ಟರ್   

ಉತ್ತರಾಖಂಡ ರಾಜ್ಯದ ಒಂದು ಯಾತ್ರಾ ಕೇಂದ್ರ ರುದ್ರಪ್ರಯಾಗ. ಆದರೆ, ಕನ್ನಡದ ಒಂದು ತಲೆಮಾರಿನವರ ಪಾಲಿಗೆ ಈ ಹೆಸರು ಕೇಳಿದ ತಕ್ಷಣದ ನೆನಪಿಗೆ ಬರುವುದು ಆ ರಾಜ್ಯವೂ ಅಲ್ಲ, ಯಾತ್ರಾ ಕೇಂದ್ರವೂ ಅಲ್ಲ; ಬದಲಿಗೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅನುವಾದಿಸಿದ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಪುಸ್ತಕ.

ಪುಸ್ತಕವನ್ನು ಮೊದಲು ಇಂಗ್ಲಿಷ್‌ನಲ್ಲಿ ಬರೆದಿದ್ದು ಖ್ಯಾತ ಬೇಟೆಗಾರ, ಲೇಖಕ ಜಿಮ್ ಕಾರ್ಬೆಟ್. ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರದ ಹೆಸರು ಕೂಡ ‘ರುದ್ರಪ್ರಯಾಗ’. ಇದರಲ್ಲಿ ಅನಂತ್ ನಾಗ್ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಕಂಡ ಕೆಲವು ಸಿನಿಮಾ ಪ್ರೇಮಿಗಳು ಕೇಳಿದ್ದ ಪ್ರಶ್ನೆ, ‘ಇದಕ್ಕೂ ತೇಜಸ್ವಿ ಅನುವಾದಿಸಿದ ಪುಸ್ತಕಕ್ಕೂ ಸಂಬಂಧ ಇದೆಯಾ’ ಎಂದು.

ಈ ಪ್ರಶ್ನೆಯನ್ನು ನಿರ್ದೇಶಕ ರಿಷಬ್‌ ಎದುರು ಇರಿಸಿದಾಗ, ‘ಹೀಗೆಲ್ಲ ಪ್ರಶ್ನೆ ಕೇಳಿದರೆ ಉತ್ತರ ಹೇಳಲು ಆಗುವುದಿಲ್ಲ’ ಎಂದು ನಕ್ಕಿದ್ದರು. ‘ಸಂಬಂಧ ಇದೆಯಾ, ಇಲ್ಲವಾ ಎಂಬುದನ್ನೆಲ್ಲ ಸಿನಿಮಾದಲ್ಲಿ ನೋಡಬೇಕು. ಈ ಪ್ರಶ್ನೆಗೆ ಈಗಲೇ ಉತ್ತರ ಹೇಳಲಾಗುವುದಿಲ್ಲ’ ಎಂದಿದ್ದರು ರಿಷಬ್.

ADVERTISEMENT

ಆದರೆ, ಜಿಮ್ ಕಾರ್ಬೆಟ್ ಬರೆದ ರುದ್ರಪ್ರಯಾಗದ ನರಭಕ್ಷಕನ ಪುಸ್ತಕದ ಛಾಯೆ, ಆ ಪುಸ್ತಕ ಓದಿದ್ದಿದ್ದರೆ ಅದರ ನೆನಪುಗಳು ಸಿನಿಮಾ ವೀಕ್ಷಿಸುತ್ತಿದ್ದಂತೆ ಬಿಚ್ಚಿಕೊಳ್ಳುತ್ತ ಸಾಗಬಹುದು ಎಂಬ ಸುದ್ದಿ ಸಿಕ್ಕಿದೆ. ಕಾರ್ಬೆಟ್ ಅವರ ಕೃತಿಯಲ್ಲಿ, ನರಭಕ್ಷಕ ಚಿರತೆಯನ್ನು ಕೊಲ್ಲಲು ಬೇಟೆಗಾರನೊಬ್ಬ (ಲೇಖಕನೇ ಆ ಬೇಟೆಗಾರ) ಹೊಂಚು ಹಾಕಿರುತ್ತಾನೆ. ಸಮಾಜಕ್ಕೆ ಕಂಟಕ ಆಗಿರುವವರನ್ನು ‍ಪ್ರಮುಖ ಪಾತ್ರವೊಂದು ಹೇಗೆ ಬೇಟೆ ಆಡುತ್ತದೆ ಎಂಬ ಕಥೆ ಈ ಚಿತ್ರದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.

ಕಾರ್ಬೆಟ್ ಬರೆದ ಪುಸ್ತಕದಲ್ಲಿ ಬರುವ ಯಾವ ಪಾತ್ರವೂ ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಆದರೆ, ಕಾರ್ಬೆಟ್‌ ಅವರು ಬೇಟೆಯಾಡುತ್ತಿದ್ದ ಬಗೆಯನ್ನು ಈ ಚಿತ್ರದ ಕಥೆಯು ವೀಕ್ಷಕನ ಕಣ್ಣೆದುರು ತಂದಿರಿಸಬಹುದು. ಕಾರ್ಬೆಟ್‌ ಅವರ ನಡೆಗಳ ಪ್ರಭಾವ ಚಿತ್ರದಲ್ಲಿ ಇದೆ ಎಂದು ಸಿನಿಮಾ ತಂಡದ ಮೂಲವೊಂದು ಹೇಳಿದೆ.

ಈ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಕಾರ್ಬೆಟ್ ಬರೆದ ಕೃತಿ ಕೂಡ ಓದುಗರಲ್ಲಿ ಥ್ರಿಲ್ ಹುಟ್ಟಿಸುವಂಥದ್ದು. ಅವರ ಕೃತಿಯಲ್ಲಿ ಬರುವ ಚಿರತೆಯು 1918ರಿಂದ 1926ರ ನಡುವಿನ ಜನರಿಗೆ ಕಂಟಕವಾಗಿ ಪರಿಣಮಿಸಿತ್ತು. ಅದನ್ನು ಕಾರ್ಬೆಟ್ ಅವರು 1926ರಲ್ಲಿ ಕೊಂದುಹಾಕಿದರು.

ಕೊರೊನಾ ಲಾಕ್‌ಡೌನ್‌ ಘೋಷಣೆ ಆಗಿರದೆ ಇದ್ದಿದ್ದರೆ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣದ ಕೆಲಸಗಳು ಶುರುವಾಗಿರುತ್ತಿತ್ತು.

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.