ADVERTISEMENT

ವೆಂಟಿಲೇಟರ್‌ನಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ಆರೋಗ್ಯ ಸ್ಥಿರ: ವೈದ್ಯರು

ಪಿಟಿಐ
Published 18 ಫೆಬ್ರುವರಿ 2026, 9:28 IST
Last Updated 18 ಫೆಬ್ರುವರಿ 2026, 9:28 IST
   

ಮುಂಬೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರ ಮೆದುಳಿನ ರಕ್ತಸ್ರಾವ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜಾವೇದ್ ಅಖ್ತರ್ ಅವರೊಂದಿಗೆ ಶೋಲೆ, ದೀವಾರ್ ಮತ್ತು ಡಾನ್ ಮುಂತಾದ ಜನಪ್ರಿಯ ಚಿತ್ರಗಳಿಗೆ ಚಿತ್ರಕಥೆ ಬರೆದಿರುವ 90 ವರ್ಷದ ಸಲೀಂ ಖಾನ್, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಳಿವಯಸ್ಸಾಗಿರುವುದರಿಂದ ಅವರ ಚೇತರಿಕೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

‘ರಕ್ತದೊತ್ತಡ ಹೆಚ್ಚಾಗಿತ್ತು, ಅದಕ್ಕೆ ಚಿಕಿತ್ಸೆ ನೀಡಿದ್ದೇವೆ. ಕೆಲ ಪರೀಕ್ಷೆಗಳನ್ನು ನಡೆಸಲು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಬೇಕಾಯಿತು. ಅದರರ್ಥ ಅವರ ಸ್ಥಿತಿ ಗಂಭೀರವಾಗಿದೆ ಎಂದಲ್ಲ' ಎಂದೂ ವೈದ್ಯರು ಹೇಳಿದ್ದಾರೆ.

ADVERTISEMENT

‘ನಾವು ಅವರಿಗೆ ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ಮಾಡಿದ್ದೇವೆ. ಸಣ್ಣ ಶಸ್ತ್ರಚಿಕಿತ್ಸೆ ಸಹ ನಡೆಸಿದ್ದೇವೆ. ಆ ಬಗ್ಗೆ ಹೆಚ್ಚು ವಿವರಗಳನ್ನು ನೀಡಲು ಹೋಗುವುದಿಲ್ಲ. ಈ ಶಸ್ತ್ರಚಿಕಿತ್ಸೆಯನ್ನು ಡಿಎಸ್ಎ(ಡಿಜಿಟಲ್ ಸಬ್‌ಟ್ರ್ಯಾಕ್ಷನ್ ಆಂಜಿಯೋಗ್ರಫಿ) ಎಂದು ಕರೆಯಲಾಗುತ್ತದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ನಾಳೆ ಅವರನ್ನು ವೆಂಟಿಲೇಟರ್‌ನಿಂದ ಹೊರತರಬಹುದು ಎಂದು ನಾವು ಆಶಿಸುತ್ತೇವೆ’ಎಂದೂ ಅವರು ತಿಳಿಸಿದ್ದಾರೆ.

ಸಲೀಂ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ಸ್ವಲ್ಪ ರಕ್ತಸ್ರಾವ ಆಗಿತ್ತು. ನಾವು ಅದನ್ನು ನಿವಾರಣೆ ಮಾಡಿದ್ದೇವೆ. ಮತ್ತೆ ಯಾವುದೇ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದಿದ್ದಾರೆ.

ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿದ್ದಂತೆ, ಅವರ ಮಕ್ಕಳಾದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್, ಮಗಳು ಅಲ್ವಿರಾ ಮತ್ತು ಅಳಿಯಂದಿರಾದ ಅತುಲ್ ಅಗ್ನಿಹೋತ್ರಿ ಮತ್ತು ಆಯುಷ್ ಶರ್ಮಾ ಆಸ್ಪತ್ರೆಗೆ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.