ADVERTISEMENT

ಪ್ರೇಮ ಗೀತೆಗಳೊಂದಿಗೆ ಬಂದ ಮನೋಮೂರ್ತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 0:15 IST
Last Updated 2 ಫೆಬ್ರುವರಿ 2024, 0:15 IST
ಮನೋಮೂರ್ತಿ
ಮನೋಮೂರ್ತಿ   

‘ಅಮೆರಿಕ, ಅಮೆರಿಕ!’, ‘ನನ್ನ ಪ್ರೀತಿಯ ಹುಡುಗಿ’ ‘ಮುಂಗಾರು ಮಳೆ’ ಮೊದಲಾದ ಹಿಟ್‌ ಚಿತ್ರಗಳ ಸೂಪರ್‌ ಹಿಟ್‌ ಗೀತೆಗಳನ್ನು ನೀಡಿರುವ ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತೊಮ್ಮೆ ಪ್ರಣಯ ಗೀತೆಗಳೊಂದಿಗೆ ಬಂದಿದ್ದಾರೆ. ಅವರು ಸಂಗೀತ ನೀಡಿರುವ ‘ಪ್ರಣಯಂ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

‘ರೊಮ್ಯಾಂಟಿಕ್‌, ಮಿಸ್ಟ್ರಿ, ಥ್ರಿಲ್ಲರ್‌ ಸಿನಿಮಾವಿದು. ಚಿತ್ರದಲ್ಲಿ 6 ಹಾಡುಗಳಿದ್ದು, ಎಲ್ಲವೂ ಸುಮಧುರವಾಗಿವೆ. ಸಿನಿಮಾದಲ್ಲಿ 5 ಹಾಡುಗಳು ಮಾತ್ರ ಬಳಕೆಯಾಗಿವೆ. 3 ಹಾಡುಗಳಿಗೆ ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಸೋನು ನಿಗಂ, ಕೈಲಾಸ್‌ ಖೇರ್‌, ಹೇಮಂತ್‌ ಮೊದಲಾದವರು ಹಾಡಿದ್ದಾರೆ’ ಎಂದು ಸಿನಿಮಾ ಸಂಗೀತದ ಕುರಿತು ವಿವರಿಸಿದರು ಮನೋಮೂರ್ತಿ.

ಅಮೆರಿಕದಲ್ಲಿ ನೆಲೆಸಿರುವ ಅವರು, ಸಂಯೋಜನೆಯ ಕೆಲಸವನ್ನು ಅಲ್ಲಿಯೇ ಮುಗಿಸುತ್ತಾರೆ. ಹಾಡಿನ ರೆಕಾರ್ಡಿಂಗ್‌ ಮತ್ತಿತರ ಕೆಲಸಗಳಿಗೆ ಬೆಂಗಳೂರಿಗೆ ಬರುತ್ತಾರೆ. ‘ಮೊದಲಿನಿಂದಲೂ 50–50 ಸರ್ಕಾರ ನನ್ನದು. ವರ್ಷದ ಅರ್ಧಭಾಗ ಇಲ್ಲಿಯೇ ಇದ್ದು ಕೆಲಸ ಮಾಡುತ್ತೇನೆ. ಸಿನಿಮಾ ಹಿಟ್‌ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತೇವೆ. ಹಾಡುಗಳು ಹಿಟ್‌ ಆಗಲಿಲ್ಲವೆಂದರೆ ಕೆಲಸ ಕಡಿಮೆಯಾಗುತ್ತದೆ’ ಎಂದು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು.

ADVERTISEMENT

‘ಮಾದ ಮತ್ತು ಮಾನಸಿ’, ‘ಸವರ್ಣ ದೀರ್ಘ ಸಂಧಿ’ ಅವರು ಸಂಗೀತ ಸಂಯೋಜಿಸಿದ ಇತ್ತೀಚಿನ ಚಿತ್ರಗಳು. ‘‘ನಾನು ಸಂಗೀತ ನೀಡಿರುವ ‘ಗಜರಾಮ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೆಸರಿಡದ ಚಿತ್ರಕ್ಕೆ ಮ್ಯೂಸಿಕ್‌ ಮಾಡಿರುವೆ. ಆ ಚಿತ್ರಕ್ಕೆ ‘ಅಮೆರಿಕ, ಅಮೆರಿಕ –2’ ಎಂದು ಶೀರ್ಷಿಕೆಯಿಡುವ ಕುರಿತು ಚರ್ಚೆ ನಡೆಯುತ್ತಿದೆ. ಅರ್ಧದಷ್ಟು ಚಿತ್ರ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿದೆ. ಆದರೆ ಕಥೆ ‘ಅಮೆರಿಕ, ಅಮೆರಿಕ’ದ ಮುಂದುವರಿದ ಭಾಗವಲ್ಲ’ ಎಂದು ತಮ್ಮ ಮುಂದಿನ ಕೆಲಸಗಳ ಕುರಿತು ಅವರು ಮಾಹಿತಿ ಹಂಚಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.