‘ಸು ಫ್ರಮ್ ಸೋ’ ಸಿನಿಮಾದ ಭರ್ಜರಿ ಯಶಸ್ಸಿನಿಂದ 2025ರ ದ್ವಿತೀಯಾರ್ಧ ಆರಂಭವಾಗಿದೆ. ಮುಂದೆ ಪ್ರತಿ ತಿಂಗಳೂ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಲು ಸರತಿಯಲ್ಲಿ ಕಾದಿವೆ. ಡಿಸೆಂಬರ್‌ನಲ್ಲಂತೂ ಚಂದನವನದ ತೆರೆಗಳಲ್ಲಿ ಸಿನಿಹಬ್ಬವೇ ಇರಲಿದೆ.
ಅಕ್ಟೋಬರ್ 2ರಂದು ರಿಷಬ್ ಶೆಟ್ಟಿ ನಟಸಿ, ನಿರ್ದೇಶಿಸಿರುವ ‘ಕಾಂತಾರ’ ಪ್ರೀಕ್ವೆಲ್ ರಿಲೀಸ್ ಆಗಲಿದೆ. ಮೇಕಿಂಗ್ ವಿಡಿಯೊ ರಿಲೀಸ್ ಮಾಡುವ ಮುಖಾಂತರವೇ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.
ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ದರ್ಶನ್ ನಟನೆಯ ‘ಡೆವಿಲ್–ದಿ ಹೀರೊ’ ಚಿತ್ರವು ಡಿ.12ರಂದು ತೆರೆಕಾಣಲಿದೆ. ಈಗಾಗಲೇ ಈ ಸಿನಿಮಾದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ಬಿಡುಗಡೆಯಾಗಿದೆ.
ಡಿ.25ಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾ ತೆರೆಕಾಣಲಿದೆ. ಮೂರು ಸ್ಟಾರ್ ಹೀರೊಗಳನ್ನು ಹೊಂದಿರುವ ಈ ಸಿನಿಮಾವು ಕಥೆ ಹಾಗೂ ಮೇಕಿಂಗ್‌ನಿಂದ ಸದ್ದು ಮಾಡುತ್ತಿದೆ.
‘ಮ್ಯಾಕ್ಸ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿರುವ, ಸುದೀಪ್ ನಟನೆಯ 47ನೇ ಸಿನಿಮಾ ‘ಮಾರ್ಕ್’ ಕೂಡಾ ಡಿ.25ರಂದು ತೆರೆಕಾಣುತ್ತಿದೆ. ಹೀಗೆ ವರ್ಷಾಂತ್ಯದಲ್ಲಿ ಮೂರು ಮುಖ್ಯ ಸಿನಿಮಾಗಳು ತೆರೆಕಾಣಲಿವೆ.
‘ಜಂಟಲ್‌ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ನಿರ್ದೇಶಕ ಹಾಗೂ ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾವೂ ಅಕ್ಟೋಬರ್–ನವೆಂಬರ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.