‘ಪದವಿಪೂರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಶಾಮನೂರು ಹೊಸ ಸಿನಿಮಾ ‘ಉಡಾಳ’ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಈ ಸಿನಿಮಾ ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ಅವರ ಜೊತೆ ಸಹ ನಿರ್ದೇಶಕರಾಗಿದ್ದ ಅಮೋಲ್ ಪಾಟೀಲ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ. ಉತ್ತರ ಕರ್ನಾಟಕದ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿಬಂದಿದೆ. ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸಿರುವ ಚಿತ್ರತಂಡ ರಿಲೀಸ್‌ಗೆ ತಯಾರಿ ಆರಂಭಿಸಿದೆ. ಇದೊಂದು ಉತ್ತರ ಕರ್ನಾಟಕ ಭಾಗದ ಚಿತ್ರವಾಗಿದ್ದು, ಇಡೀ ಚಿತ್ರೀಕರಣ ವಿಜಯಪುರದಲ್ಲೇ ನಡೆದಿದೆ.
ಈ ಚಿತ್ರದಲ್ಲಿ ಪೃಥ್ವಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ ಶ್ರೀನಿವಾಸ್ ‘ಉಡಾಳ’ ಚಿತ್ರದ ನಾಯಕಿ. ಬಲ ರಾಜವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದಾರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವು ಉತ್ತರ ಕರ್ನಾಟಕದ ಭಾಗದ ದೊಡ್ಡ ಮಟ್ಟದ ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ ಎಂದಿದೆ ಚಿತ್ರತಂಡ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ‘ಪದವಿಪೂರ್ವ’ ಚಿತ್ರವನ್ನೂ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ನಿರ್ಮಾಣ ಮಾಡಿದ್ದರು.
ಚಿತ್ರದಲ್ಲಿ ಯೋಗರಾಜ್ ಭಟ್ ಬರೆದಿರುವ ಐದು ಹಾಡುಗಳಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ‘ದ್ವಾಪರ’ ಹಾಡಿದ್ದ ಜಸ್ಕರಣ್ ಸಿಂಗ್, ಉತ್ತರ ಕರ್ನಾಟಕದ ಮಾಳು ನಿಫ್ನಾಳ್, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಮತ್ತು ಚೇತನ್ ಸೋಸ್ಕ ಹಾಡಿಗೆ ದನಿಯಾಗಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಚಿತ್ರಗ್ರಹಣ, ಮಧು ತುಂಬಕೆರೆ ಸಂಕಲನ, ಅರ್ಜುನ್ ರಾಜ್, ವಿನೋದ್ ಸಾಹಸ ನಿರ್ದೇಶನ ಹಾಗೂ ಭಜರಂಗಿ ಮೋಹನ್, ರಘು ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.