ADVERTISEMENT

ಸಾರಾ ಅಲಿಯೂ, ಸ್ವಜನ ಪಕ್ಷಪಾತವೂ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 10:45 IST
Last Updated 9 ಜೂನ್ 2019, 10:45 IST
ಅಮೃತಾ ಸಿಂಗ್ ಮತ್ತು ಸಾರಾ ಅಲಿ ಖಾನ್
ಅಮೃತಾ ಸಿಂಗ್ ಮತ್ತು ಸಾರಾ ಅಲಿ ಖಾನ್   

ಜನಪ್ರಿಯ ಸಿನಿಮಾ ನಟರ ಮಕ್ಕಳಾಗಿ ಹುಟ್ಟುವುದು ಕೆಲವರಿಗೆ ವರವಾದರೆ ಮತ್ತೆ ಕೆಲವರಿಗೆ ಶಾಪವೂ ಹೌದು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮಗಳಾದ ಸಾರಾ ಅಲಿ ಖಾನ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವುದು ಈಗ ಸುದ್ದಿಯ ಕೇಂದ್ರಬಿಂದು.

ಸೆಲೆಬ್ರಿಟಿ ಕಲಾವಿದರಮಗಳಾಗಿದ್ದರೂ ಸಾರಾ ತನ್ನ ಸ್ವಂತ ಸಾಮರ್ಥ್ಯದಿಂದಲೇ ಯಶಸ್ಸಿನತ್ತ ಸಾಗುತ್ತಿದ್ದಾರೆ. ಬಾಲ್ಯದಲ್ಲೇ ಜನಪ್ರಿಯತೆಯ ಜತೆಜತೆಗೇ ಬೆಳೆದ ಸಾರಾ, ‘ಕೇದಾರ್‌ನಾಥ್’ ಮತ್ತು ‘ಸಿಂಬಾ’ದಲ್ಲಿ ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರ ಮನಗೆದ್ದವರು.

ಸಾರಾಗೆ ವಯಸ್ಸಿನ್ನೂ 23. ಆದರೆ, ಸ್ವಜನಪಕ್ಷಪಾತದ ಬಗ್ಗೆ ನಿಷ್ಪಕ್ಷಪಾತವಾಗಿ ಮಾತನಾಡುವಷ್ಟು ಅವರು ಪ್ರಬುದ್ಧರು. ಅದಕ್ಕೆ ಅವರ ಮಾತುಗಳೇ ಸಾಕ್ಷಿ. ‘ದೊಡ್ಡ ನಟರ ಮಕ್ಕಳಾಗಿ ಹುಟ್ಟುವುದರ ಬಗ್ಗೆ ಬಹಳಷ್ಟು ಮಂದಿ ಅನ್ಯಾಯ ಇಲ್ಲವೇ ಅಪಮೌಲ್ಯದ ಕುರಿತಾಗಿಯೇ ಮಾತನಾಡುತ್ತಾರೆ. ಅಂಥ ಮಕ್ಕಳಿಗೆ ಅನವಶ್ಯಕವಾಗಿ ಸೌಲಭ್ಯಗಳು ಸಿಗುತ್ತವೆ ಎಂತಲೂ ಮಾತನಾಡುತ್ತಾರೆ. ಆದರೆ, ನಾನು ಇಂಥ ಋಣಾತ್ಮಕ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಪಾಡಿಗೆ ನನ್ನ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಮಾಡುತ್ತಿರುತ್ತೇನೆ’ ಎಂದು ಸಾರಾ ನುಡಿದಿದ್ದಾರೆ.

ADVERTISEMENT

‘ಪ್ರಭಾವಳಿ ಮತ್ತು ಸ್ವಜನಪಕ್ಷಪಾತವನ್ನು ಹೊರತು ಪಡಿಸಿಯೂ ನೀವು ಯಶಸ್ಸು ಗಳಿಸಬಲ್ಲಿರಿ. ಅಂಥ ಯಶಸ್ಸನ್ನು ನಾನು ಪ್ರಶಂಸೆ ಮಾಡುತ್ತೇನೆ. ಸೈಫ್ ಮತ್ತು ಅಮೃತಾ ಅವರ ಮಗಳಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ, ನನ್ನ ಅಸ್ಮಿತೆಯ ಹಾದಿಯಲ್ಲಿ ನಾನಿದ್ದೇನೆ. ಇದು ಕೇವಲ ಆರಂಭ ಮಾತ್ರ. ನನ್ನ ದಾರಿ ಇನ್ನೂ ಬಹುದೂರ ಸಾಗಬೇಕಿದೆ’ ಅನ್ನುವುದು ಸಾರಾಳ ಖಡಕ್ ಮಾತು.

ಸಂದರ್ಶನದಲ್ಲಿ ಅಮ್ಮ ಅಮೃತಾಳ ಬಗ್ಗೆ ಭಾವುಕವಾಗಿ ಮಾತನಾಡಿರುವ ಆಕೆ, ‘ಅಮ್ಮನ ಜತೆಯಲ್ಲಿ ಇರಬೇಕೆಂಬುದು ನನ್ನ ತೀರ್ಮಾನವಾಗಿತ್ತು. ಅಂತೆಯೇ ಜೀವನದ ಉಳಿದ ಭಾಗವನ್ನೂ ಅಮ್ಮನ ಜತೆಯಲ್ಲೇ ಇರಲುಬಯಸುವೆ. ಈ ಬಗ್ಗೆ ಅವಳಿಗೆ ಹೇಳಿದರೆ ಸಾಕು, ಅವಳು ಬೇಸರಪಟ್ಟುಕೊಳ್ಳುತ್ತಾಳೆ. ಅವಳು ಈಗಲೇ ನನ್ನ ಮದುವೆಯ ಬಗ್ಗೆಯೂ ಯೋಚಿಸಿದ್ದಾಳೆ. ಮದುವೆಯಾದರೇನಂತೆ ಅವಳು ನನ್ನ ಜತೆ ಇರಬಹುದಲ್ಲವೇ? ಅಮ್ಮನೊಂದಿಗೆ ಕಾಲ ಕಳೆಯುವುದು ನನಗಿಷ್ಟ. ಅಮ್ಮ ಕೆಲವೇ ದಿನಗಳ ಕಾಲ ದೂರವಿದ್ದರೂ ನನಗೆ ಕಷ್ಟವಾಗುತ್ತದೆ. ಅವಳಿಂದ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ನನ್ನ ಜೀವನದಲ್ಲಿ ಹೆದರುವುದು ಎಂದಾದಲ್ಲಿ ಅದು ಅಮ್ಮನಿಗೆ ಮಾತ್ರ!’ ಎನ್ನುತ್ತಾಳೆ ಸಾರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.