ADVERTISEMENT

ಸಾರಾ ಜಾಣೆ, ಸೂಕ್ತ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್
ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್   

‘ಲವ್ ಆಜ್‌ ಕಲ್‌’ ಚಿತ್ರದ ಮುಖ್ಯ ಪಾತ್ರ ‘ಜೋ’ ನಿಭಾಯಿಸಲು ಸಾರಾ ಅಲಿ ಖಾನ್ ಅವರೇ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದರು ಎನ್ನುತ್ತಾರೆ ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ. ಈ ಚಿತ್ರವು ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ಇಮ್ತಿಯಾಜ್ ಅವರು ‘ಲವ್ ಆಜ್ ಕಲ್’ ಹೆಸರಿನಲ್ಲೇ 2009ರಲ್ಲಿ ಒಂದು ಸಿನಿಮಾ ನಿರ್ದೇಶಿಸಿದ್ದರು. ಇದರಲ್ಲಿ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದರು. 2020ರಲ್ಲಿ ತೆರೆ ಕಾಣಲಿರುವ ಚಿತ್ರಕ್ಕೂ ಇಮ್ತಿಯಾಜ್ ಅವರು ಹಳೆಯ ಚಿತ್ರದ ಶೀರ್ಷಿಕೆಯನ್ನೇ ಇಟ್ಟಿದ್ದಾರೆ.

ಹೊಸ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಭಿನಯಿಸುತ್ತಿದ್ದಾರೆ.ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಹೊಸ ಕಲಾವಿದೆ ಆರುಷಿ ಶರ್ಮಾ ಕೂಡ ಬಣ್ಣ ಹಚ್ಚಿದ್ದಾರೆ. ‘ಸಾಂಪ್ರದಾಯಿಕ ಭಾರತೀಯ ಸಿನಿಮಾ ನಾಯಕಿ ಎಂಬ ವ್ಯಾಖ್ಯಾನಕ್ಕೆ ಹೊಸ ಅರ್ಥವನ್ನು ನೀಡುವ ಶಕ್ತಿ ಸಾರಾ ಅವರಿಗೆ ಇದೆ’ ಎನ್ನುತ್ತಾರೆ ಇಮ್ತಿಯಾಜ್.

ADVERTISEMENT

‘ಜೋ ಪಾತ್ರ ನನ್ನ ಪಾಲಿಗೆ ಬಹಳ ವಿಶಿಷ್ಟವಾದುದು. ಆಕೆ ಹೊರಜಗತ್ತಿಗೆ ಗಡುಸಾಗಿ ಕಾಣಿಸಿಕೊಳ್ಳುವ ಮೂಲಕ ತನ್ನ ಭಾವನೆಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ, ಆಕೆ ಭಾವನಾತ್ಮಕವಾಗಿ ಗಟ್ಟಿಗಿತ್ತಿ ಅಲ್ಲದ ಆಧುನಿಕ ಕಾಲದ ಹೆಣ್ಣುಮಗಳು. ಆಕೆಯ ಮನಸ್ಸು ಮತ್ತು ಹೃದಯದ ನಡುವೆ ಒಂದು ತಾಕಲಾಟ ನಡೆಯುತ್ತಿರುತ್ತದೆ. ಹಾಗೆಯೇ, ಆಕೆಯ ವೃತ್ತಿ ಸಂಬಂಧಿ ಮಹತ್ವಾಕಾಂಕ್ಷೆಗಳು ಮತ್ತು ಪ್ರೇಮದ ವಿಚಾರದಲ್ಲಿ ಕೂಡ ತಾಕಲಾಟ ಇರುತ್ತದೆ’ ಎಂದು ಪಾತ್ರದ ಕುರಿತ ವಿವರಣೆ ನೀಡುತ್ತಾರೆ ಇಮ್ತಿಯಾಜ್.

‘ಸಾರಾ ಅವರು ಭಾವನಾತ್ಮಕ ವಿಚಾರಗಳಲ್ಲಿ ಬಹಳ ಚುರುಕಾಗಿದ್ದಾರೆ. ಹೇಳಿದ್ದನ್ನು ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಅವರ ಜೊತೆ ಕೆಲಸ ಮಾಡಿದ್ದು ನನಗೆ ಬಹಳ ಖುಷಿ ತಂದುಕೊಟ್ಟಿದೆ. ಮತ್ತೆ ಮತ್ತೆ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಮೂಡುತ್ತದೆ. ಜೋ ಪಾತ್ರಕ್ಕೆ ಅವರು ಅತ್ಯಂತ ಸೂಕ್ತ ಆಯ್ಕೆ’ ಎನ್ನುವುದು ನಿರ್ದೇಶಕರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.