ADVERTISEMENT

ಈ ವಾರ ಏಳು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
ಸೂಪರ್‌ ಹಿಟ್‌
ಸೂಪರ್‌ ಹಿಟ್‌   

ಸತೀಶ್ ನೀನಾಸಂ, ಸಪ್ತಮಿ ಗೌಡ ಸೇರಿದಂತೆ ಹಲವು ತಾರೆಯರ ಏಳು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ. ಆ್ಯಕ್ಷನ್, ಥ್ರಿಲ್ಲರ್, ಪೌರಾಣಿಕ ಹಾಗೂ ಪ್ರೇಮಕಥೆಗಳು ಪ್ರೇಕ್ಷಕರ ಮುಂದೆ...

‘ದಿ ರೈಸ್‌ ಆಫ್‌ ಅಶೋಕ’

ಸತೀಶ್ ನೀನಾಸಂ, ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ನಿರ್ದೇಶಕ ವಿನೋದ್‌ ದೋಂಡಾಳೆ ಅವರ ಅಕಾಲಿಕ ಮರಣದಿಂದ ಮನು ಶೆಡ್ಗಾರ್‌ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾವಿದು. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತ ಸಾಗುವ ಕಥೆ ಇದಾಗಿದೆ.

ADVERTISEMENT

ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಛಾಯಾಚಿತ್ರಗ್ರಹಣ, ಮನು ಶೆಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. 

ಸೂಪರ್‌ ಹಿಟ್‌

ಬಿಗ್‌ಬಾಸ್‌ ಖ್ಯಾತಿಯ ಗಿಲ್ಲಿ, ಗೌರವ್‌ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ. ಕಾಮಿಡಿ, ಥ್ರಿಲ್ಲರ್‌ ಜಾನರ್‌ನ ಚಿತ್ರಕ್ಕೆ ವಿಜಯಾನಂದ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ವಿಶೇಷ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಇದೆ. ಏಕೆ ಈ ಶೀರ್ಷಿಕೆ ಇಡಲಾಗಿದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಇಡೀ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವಂಥ ಅಂಶಗಳು, ತಿರುವುಗಳನ್ನು ಹೊಂದಿದೆ’ ಎಂದಿದ್ದಾರೆ ನಿರ್ದೇಶಕ. 

ಜಿ.ಉಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಡಿ ನಾಗಾರ್ಜುನ ಛಾಯಾಚಿತ್ರಗ್ರಹಣ, ಶ್ರೀಕಾಂತ್ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ ಮುಂತಾದವರು ಚಿತ್ರದಲ್ಲಿದ್ದಾರೆ. 

ಹಯಗ್ರೀವ

ಧನ್ವೀರ್‌ಗೆ ಸಂಜನಾ ಆನಂದ್‌ ಜೋಡಿಯಾಗಿ ನಟಿಸಿರುವ ಚಿತ್ರವಿದು. ರಘುಕುಮಾರ್ ನಿರ್ದೇಶನದ ಚಿತ್ರಕ್ಕೆ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ. ‘ಪೌರಾಣಿಕ ಕಥೆ ಆಧಾರಿತ ಚಿತ್ರವಿದು. ಆ್ಯಕ್ಷನ್‌ ಜತೆಗೆ ಮನರಂಜನೀಯ ಅಂಶಗಳಿವೆ’ ಎಂದಿದ್ದಾರೆ ನಿರ್ದೇಶಕ. ಸಾಧು ಕೋಕಿಲ, ರಂಗಾಯಣ ರಘು, ಶರತ್ ಲೋಹಿತಾಶ್ವ , ಶೊಭರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗಿರೀಶ್ ಆರ್. ಗೌಡ ಛಾಯಾಚಿತ್ರಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

ಹೈ ವೋಲ್ಟೇಜ್‌ ರಕ್ಷಕ

ರಾಜೇಶ್ ಮೂರ್ತಿ ನಿರ್ದೇಶನದ ಆ್ಯಕ್ಷನ್‌, ಥ್ರಿಲ್ಲರ್ ಜಾನರ್‌ನ ಚಿತ್ರ. ಯಶಸ್ವಾ ಮೂರ್ತಿ ನಾಯಕನಾಗಿ ನಟಿಸಿದ್ದಾರೆ‌. ಮನು ಪಾಂಡ್ಯ ಹಾಗೂ ನೇವಿ ಮಂಜು ಈ ಚಿತ್ರದ ನಿರ್ಮಾಪಕರು.

‘ದೇಹ ಬದಲಿಸುವ ವಿಭಿನ್ನ ಪರಿಕಲ್ಪನೆ ಕುರಿತಾದ ಚಿತ್ರವಿದು. ವಿಶ್ವ ಯುದ್ಧ ಸಮಯದಲ್ಲಿ ಇಂಥ ಪ್ರಯೋಗ ಮಾಡುತ್ತಿದ್ದರು. ಚಿತ್ರದಲ್ಲಿ ನಾಯಕ ವಿಧಿವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುವ ತಂತ್ರಜ್ಞ. ಆತ ಈ ದೇಹ ಬದಲಿಸುವ ತಂತ್ರವನ್ನು ಕಂಡುಹಿಡಿಯುತ್ತಾನೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರಕಥೆ’ ಎಂದಿದ್ದಾರೆ ನಿರ್ದೇಶಕ. 

ಬೆಂಗಳೂರು, ಕೆಜಿಎಫ್ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಛಾಯಾಚಿತ್ರಗ್ರಹಣವಿದೆ. ರಾಜೇಶ್ ಮೂರ್ತಿ ನಿರ್ದೇಶನದ ಜತೆಗೆ ಸಂಕಲನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ನಾಯಕಿಯಾಗಿ ಹರ್ಶಿತಾ ಗೌರಿ ನಟಿಸಿದ್ದಾರೆ.

ಹೈ ವೋಲ್ಟೇಜ್‌

ಪ್ರೇಮಿ

ಎಸ್‌.ಪ್ರದೀಪ್ ವರ್ಮ ನಿರ್ದೇಶನದ ಪ್ರೀತಿ ಕುರಿತಾದ ಕಥೆ ಹೊಂದಿರುವ ಸಿನಿಮಾ. 

‘ದಾವಣಗೆರೆ, ದೇವರ ಬೆಳಕೆರೆ, ಗೋಕರ್ಣ,‌ ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಟಿ.ಎಸ್‌.ಅಕ್ಕಮಹಾದೇವಿ ಕಥೆ ಬರೆದಿದ್ದಾರೆ’ ಎಂದು ನಿರ್ದೇಶಕ ಹೇಳಿದ್ದಾರೆ.

ಗೌತಮ್ ಮಟ್ಟಿ ಛಾಯಾಚಿತ್ರಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಅದ್ವಿಕ್‌ ಚಿತ್ರದ ನಾಯಕ. ಸಾತ್ವಿಕ, ಶೋಭಿತ, ಎಚ್. ಜಿ. ವೀರೇಶ್, ದ್ವಿತ ಕೆ ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಆಯುಧ

ದೇವರಾಜ್‌ ಕುಮಾರ್‌ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಸಿನಿಮಾ. ಹೊನ್ನಾವರ, ಬೈಂದೂರು, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿರುವ ಈ ಚಿತ್ರವು ಆ್ಯಕ್ಷನ್, ಥ್ರಿಲ್ಲರ್ ಫ್ಯಾಮಿಲಿ ಡ್ರಾಮಾ ಜಾನರ್‌ನಲ್ಲಿದೆ. 

ಸಿನಿಮಾದಲ್ಲಿ ನಾಯಕಿಯರಾಗಿ ಅಮೃತ ಹಾಗೂ ಸಂಹಿತ ವಿನ್ಯ ನಟಿಸಿದ್ದು, ರಘು, ಸೂರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸತೀಶ್‌ ಸ್ಟೀವನ್ ಸಂಗೀತ ನಿರ್ದೇಶನ, ವೀನಸ್ ಮೂರ್ತಿ ಛಾಯಾಚಿತ್ರಗ್ರಹಣ, ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ವೀರ ಕಂಬಳ

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ ತುಳುನಾಡಿನ ಕಂಬಳದ ಕುರಿತಾದ ಕಥೆ ಹೊಂದಿದೆ. ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ನಾಯಕನಾಗಿ ನಟಿಸಿದ್ದಾರೆ. ವಿಜಯ್‌ಕುಮಾರ್‌ ಕೊಡಿಯಾಲ್‌ ಬೈಲ್‌ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರಾಜ್‌, ರವಿಶಂಕರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಎಸ್. ಬಾಬು ಸಂಕಲನ ಚಿತ್ರಕ್ಕಿದೆ. 

ಸಂಜನಾ ಆನಂದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.