ADVERTISEMENT

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದವರ ಬಿಡುಗಡೆಯಲ್ಲಿ ನಟ ಶಾರುಕ್ ಪಾತ್ರವಿಲ್ಲ

ಹೇಳಿಕೆ ಬಿಡುಗಡೆ ಮಾಡಿದ ನಟನ ಕಚೇರಿ

ಪಿಟಿಐ
Published 13 ಫೆಬ್ರುವರಿ 2024, 13:19 IST
Last Updated 13 ಫೆಬ್ರುವರಿ 2024, 13:19 IST
ಶಾರುಕ್‌ ಖಾನ್‌
ಶಾರುಕ್‌ ಖಾನ್‌   

ಮುಂಬೈ: ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಯಲ್ಲಿ ಶಾರುಕ್‌ ಖಾನ್ ಅವರ ಪಾತ್ರವಿದೆ ಎಂಬ ಸುದ್ದಿಯನ್ನು ನಟನ ಕಚೇರಿ ತಳ್ಳಿಹಾಕಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಶಾರುಕ್‌ ಖಾನ್‌ ಕಚೇರಿ, ಇಂತಹ ಆಧಾರರಹಿತ ಹೇಳಿಕೆಗಳಲ್ಲಿ ಹುರುಳಿಲ್ಲ ಎಂದಿದೆ.

‘ಅಧಿಕಾರಿಗಳ ಬಿಡುಗಡೆ ಹಿಂದೆ ಶಾರುಕ್ ಖಾನ್‌ ಅವರ ಪಾತ್ರವಿದೆ ಎಂದು ವರದಿಯಾಗಿದ್ದು, ಇವೆಲ್ಲ ಆಧಾರರಹಿತ ಸಮರ್ಥನೆಗಳಾಗಿವೆ. ರಾಜತಾಂತ್ರಿಕ ವಿಷಯವನ್ನು ನಮ್ಮ ನಾಯಕರು ಸಮರ್ಥವಾಗಿ ನಿರ್ವಹಿಸಿದ್ದು, ಅಧಿಕಾರಿಗಳ ಬಿಡುಗಡೆಯ ಸಂಪೂರ್ಣ ಯಶಸ್ಸು ಸರ್ಕಾರಕ್ಕೆ ಸಲ್ಲುತ್ತದೆ. ಇದರಲ್ಲಿ ಶಾರುಕ್‌ ಖಾನ್‌ ಅವರ ಪಾತ್ರವಿದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು. ನೌಕಾಪಡೆಯ ಅಧಿಕಾರಿಗಳೆಲ್ಲರು ಮರಣದಂಡನೆ ಶಿಕ್ಷೆಯಿಂದ ಪಾರಾಗಿ ತವರು ಸೇರಿರುವುದು ಎಲ್ಲ ಭಾರತೀಯರಂತೆ ಶಾರುಕ್ ಅವರಿಗೂ ಸಂತಸ ತಂದಿದೆ’ ಎಂದು ತಿಳಿಸಿದೆ.

ADVERTISEMENT

ಈ ಕುರಿತ ಹೇಳಿಕೆ ಪ್ರತಿಯನ್ನು ಶಾರುಕ್ ಖಾನ್ ಅವರ ಮ್ಯಾನೇಜರ್ ಪೂಜಾ ಡಡ್ಲಾನಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳ ಬಿಡುಗಡೆ ವಿಚಾರವಾಗಿ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ ವಿಫಲವಾದ ಹಿನ್ನೆಲೆ ಪ್ರಧಾನಿ ಮೋದಿ ಅವರು ಶಾರುಕ್‌ ಖಾನ್ ಅವರ ಸಹಕಾರ ಕೋರಿದ್ದರು ಎಂದು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.