ADVERTISEMENT

40 ಮಂದಿ ನರ್ತಕರಿಗೆ ಹಣ ಸಹಾಯ ಮಾಡಿದ ಶಾಹಿದ್ ಕಪೂರ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 10:26 IST
Last Updated 11 ಜೂನ್ 2020, 10:26 IST
ಶಾಹಿದ್ ಕಪೂರ್‌
ಶಾಹಿದ್ ಕಪೂರ್‌   

ಕೋವಿಡ್‌ – 19 ಕಾರಣದಿಂದ ಲಾಕ್‌ಡೌನ್ ವಿಧಿಸಿದ್ದು ಕಳೆದ ಕೆಲ ತಿಂಗಳಿನಿಂದ ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ಬಿದ್ದಿತ್ತು. ಇದರಿಂದ ಸಿನಿರಂಗದಲ್ಲಿ ದಿನಗೂಲಿ ಕೆಲಸ ಮಾಡುವ ಅನೇಕರು ತೊಂದರೆ ಅನುಭವಿಸಿದ್ದರು. ಹಾಗಾಗಿ ಅನೇಕ ಬಾಲಿವುಡ್‌ ನಟರು ಅಂತಹವರಿಗೆ ಸಹಾಯಹಸ್ತ ಚಾಚಿದ್ದಾರೆ. ಸಲ್ಮಾನ್‌ ಖಾನ್‌ ಸಹಾಯದ ಬೆನ್ನಲ್ಲೇ ನಟ ಶಾಹಿದ್ ಕಪೂರ್‌ ಸಿನಿಮಾದ ನರ್ತಕರಿಗೆ ಸಹಾಯ ಮಾಡಿದ್ದಾರೆ. ತಮ್ಮ ಮೊದಲನೇ ಸಿನಿಮಾದಿಂದ ತಮ್ಮೊಂದಿಗೆ ಕೆಲಸ ಮಾಡಿದ ನರ್ತಕರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾವಣೆ ಮಾಡಿದ್ದಾರೆ. 40 ಮಂದಿ ಆರ್ಥಿಕ ಸಂಕಷ್ಟದಲ್ಲಿರುವ ನರ್ತಕರಿಗೆ ಹಣ ಸಹಾಯ ಮಾಡಿರುವ ಶಾಹಿದ್ ಮುಂದಿನ 2 ರಿಂದ 3 ತಿಂಗಳು ಹೀಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನೃತ್ಯ ಸಂಯೋಜಕರಾದ ಬಾಸ್ಕೊ ತಂಡದ ಇಪ್ಪತ್ತು ಮಂದಿ ಹಾಗೂ ಅಹ್ಮದ್ ಖಾನ್ ತಂಡದ 20 ಮಂದಿಗೆ ಶಾಹಿದ್ ಸಹಾಯ ಮಾಡಿದ್ದಾರೆ ಎಂಬುದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಬಾಲಿವುಡ್‌ನ ಮಾಜಿ ಡಾನ್ಸರ್‌ ರಾಜ್‌ ಸುರಾನಿ ‘ಶಾಹಿದ್ ಕಪೂರ್ ಅವರೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ 40 ಮಂದಿ ನರ್ತಕರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದಾರೆ. ಅಲ್ಲದೇ ಇನ್ನೂ 3 ತಿಂಗಳ ತನಕ ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಶಾಹಿದ್‌ ಮೊದಲ ಸಿನಿಮಾ ‘ಇಷ್ಕ್‌ ವಿಷ್ಕ್’‌ನಿಂದ ಅವರೊಂದಿಗೆ ಸಿನಿಮಾದಲ್ಲಿ ನೃತ್ಯ ಮಾಡಿದ್ದ ನರ್ತಕರ ಪಟ್ಟಿಯನ್ನು ಸಿದ್ಧ ಪಡಿಸಿದ್ದೇವೆ. ಆ ಸಿನಿಮಾಗೆ ಈಗ 17 ವರ್ಷವಾಗಿದೆ. ಸಿನಿಮಾಗಳಲ್ಲಿ ಹಿನ್ನೆಲೆಯಲ್ಲಿ ನರ್ತಿಸುವ ನರ್ತಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಲ್ಲಿ ಅನೇಕರಿಗೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರಲ್ಲದೇ ಶಾಹಿದ್‌ ಅಭಿನಯದ ‘ಶಾನ್‌ದಾರ್’‌ ಹಾಗೂ ‘ಅಗ್ಲಾ ಬಗ್ಲಾ’ ಸಿನಿಮಾದಲ್ಲಿ ನೃತ್ಯ ಮಾಡಿದವರನ್ನು ಆಯ್ಕೆ ಮಾಡಿ ಪಟ್ಟಿ ನೀಡಿದ್ದೇವೆ. ಅವರೆಲ್ಲರಿಗೂ ಶಾಹಿದ್‌ ಹಣ ಸಹಾಯ ಮಾಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಸದ್ಯ ಶಾಹಿದ್ ಕುಟುಂಬಸ್ಥರೊಂದಿಗೆ ಪಂಜಾಬ್‌ನಲ್ಲಿ ನೆಲೆಸಿದ್ದು ಎಲ್ಲವೂ ಸಹಜ ಸ್ಥಿತಿಗೆ ಬಂದ ಮೇಲೆ ಮುಂಬೈಗೆ ಮರಳಲಿದ್ದಾರೆ. ಮೂಲಗಳ ಪ್ರಕಾರ ಕೊರೊನಾ ಬಿಕ್ಕಟ್ಟು ಶಮನವಾಗುವವರೆಗೂ ಶಾಹಿದ್ ಅಲ್ಲೇ ಉಳಿಯುತ್ತಾರಂತೆ. ಒಬ್ಬ ಜವಾಬ್ದಾರಿಯುವ ನಾಗರಿಕನಾಗಿ ತಮ್ಮ ಕುಟುಂಬ ಹಾಗೂ ಸಮಾಜದ ಬಗ್ಗೆ ಯೋಚಿಸುತ್ತಿರುವ ಶಾಹಿದ್‌ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ.

ಶಾಹಿದ್ ನಟನೆಯ ಕಬೀರ್ ಸಿಂಗ್‌ ಚಿತ್ರವು ಬಾಕ್ಸ್‌ಆಫೀಸ್‌ ಕೊಳ್ಳೆ ಹೊಡೆದಿದ್ದು, ಇದು ಅವರ ವೃತ್ತಿ ಬದುಕಿನ ಮಹತ್ವದ ಚಿತ್ರವೂ ಆಗಿದೆ.

ಶಾಹಿದ್ ಹಿಂದಿಯ ‘ಜೆರ್ಸಿ’ ಸಿನಿಮಾದಲ್ಲೂ ನಾಯಕನಾಗಿ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.