ADVERTISEMENT

ಕೋವಿಡ್‌ನಿಂದ ಹಿರಿಯ ನಟ ಶಂಖನಾದ ಅರವಿಂದ್‌ ನಿಧನ

​ಪ್ರಜಾವಾಣಿ ವಾರ್ತೆ
Published 7 ಮೇ 2021, 9:58 IST
Last Updated 7 ಮೇ 2021, 9:58 IST
ಶಂಖನಾದ ಅರವಿಂದ್‌
ಶಂಖನಾದ ಅರವಿಂದ್‌   

ಬೆಂಗಳೂರು: ಶಂಖನಾದ, ಬೆಟ್ಟದ ಹೂವು ಖ್ಯಾತಿಯ ಹಿರಿಯ ನಟ, ನಿರ್ಮಾಪಕ ಶಂಖನಾದ ಅರವಿಂದ್‌(70) ಅವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಕೋವಿಡ್‌ ದೃಢಪಟ್ಟಿದ್ದ ಅರವಿಂದ್‌ ಅವರನ್ನು 10 ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ರಾತ್ರಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

‘ಅಪರೂಪದ ಅತಿಥಿಗಳು’ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅರವಿಂದ್‌ ಅವರು ‘ಅಪರಿಚಿತ’, ‘ಅನುಭವ’ ಚಿತ್ರದಲ್ಲಿ ನಟಿಸಿದ ಬಳಿಕ ಖ್ಯಾತಿ ಪಡೆದರು. ಖ್ಯಾತ ನಿರ್ದೇಶಕ ದಿವಂಗತ ಕಾಶಿನಾಥ್‌ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ಪಾತ್ರಕ್ಕೆ ಬಣ್ಣಹಚ್ಚಿದ್ದರು. ಅವರು ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಅವರು ಅರವಿಂದ್‌ ಅವರ ಹಿರಿಯ ಪುತ್ರಿ. ಪ್ರಾರ್ಥನ ಹಾಗೂ ಅಭಿಷೇಕ್‌ ಅವರೂ ಕಲಾವಿದರಾಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಇವರ ಪತ್ನಿ ರಮಾ ಅರವಿಂದ್ ಅನಾರೋಗ್ಯದಿಂದ ಮೃತಪಟ್ಟಿದ್ದರು.

ADVERTISEMENT

ಏಳು ರಾಷ್ಟ್ರಪ್ರಶಸ್ತಿ ಬಂದಿರುವ ಸಿನಿಮಾ ಸೇರಿ 200ಕ್ಕೂ ಅಧಿಕ ಚಲನಚಿತ್ರ ಮತ್ತು ಹಲವು ಧಾರಾವಾಹಿಗಳಲ್ಲಿ ಅರವಿಂದ್‌ ನಟಿಸಿದ್ದರು. ಇವರು ನಾಯಕನಾಗಿ ನಟಿಸಿದ ಶಂಖನಾದ ಚಿತ್ರ ರಾಷ್ಟ್ರಪ್ರಶಸ್ತ್ರಿಯನ್ನೂ ಬಾಚಿತ್ತು. ‘ಸಿಕ್ಸ್‌ ಟು ಸಿಕ್ಸ್‌’, ‘ಗುಪ್‌ಚುಪ್‌’ ಸಿನಿಮಾವನ್ನು ಇವರು ನಿರ್ಮಾಣ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.