
2006ರಲ್ಲಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ನಟಿ ಶರ್ಮಿಳಾ ಮಾಂಡ್ರೆ ಇದೀಗ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ‘ಡೆವಿಲ್’ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ತಮ್ಮ ಸಿನಿಪಯಣ, ಕನಸುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ...
*19 ವರ್ಷಗಳ ಸಿನಿಪಯಣದ ಅನುಭವ?
ಈ ಸಿನಿಪಯಣ ಆರಾಮದಾಯಕವಾಗಿತ್ತು ಎನ್ನುವುದಕ್ಕೆ ಸಾಧ್ಯವಿಲ್ಲ. ಹಲವು ಏರುಪೇರುಗಳನ್ನು ಕಂಡಿದ್ದೇನೆ. ಕೆಲವು ಸಿನಿಮಾಗಳು ಚೆನ್ನಾಗಿ ಓಡಿದವು. ಕೆಲವು ಸೋತವು. ಸಾಲು ಸಾಲು ಸಿನಿಮಾ ಸಿಗುತ್ತಿದ್ದ ಕಾಲವೂ ಇತ್ತು. ಜೊತೆಗೆ ಒಂದೇ ಒಂದು ಸಿನಿಮಾವೂ ಸಿಗದ ಕಾಲವೂ ಇತ್ತು. ಯಶಸ್ಸು–ಸೋಲಿನಲ್ಲಿ ಹಲವು ಪಾಠಗಳನ್ನು ಕಲಿತಿದ್ದೇನೆ. ಈ ರೀತಿ ಏರುಪೇರುಗಳೇ ಜೀವನ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಮಾಡಿದಂತಹ ಪಾತ್ರಗಳು ಹಾಗೂ ಸಿನಿಮಾಗಳ ಬಗ್ಗೆ ತೃಪ್ತಿಯಿದೆ.
ನಾನು ಸಿನಿಪಯಣ ಆರಂಭಿಸಿದ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಚಿತ್ರೀಕರಣದಿಂದ ಹಿಡಿದು ಪಾತ್ರಗಳ ಪೋಷಣೆವರೆಗೂ ಹಲವು ಬದಲಾವಣೆಗಳಾಗಿವೆ. ನಾವೊಂತರ ಲಕ್ಕಿ ಎನ್ನಬಹುದು. ಆಗ ಕ್ಯಾಮೆರಾ ಮುಂದೆ ತಪ್ಪು ಮಾಡಲು ಹೆಚ್ಚಿನ ಅವಕಾಶಗಳು ಇರಲಿಲ್ಲ. ಕ್ಯಾರವಾನ್ ಇರಲಿಲ್ಲ. ಹೀಗಾಗಿ ವೃತ್ತಿಪರರಾಗಿರುವುದನ್ನು, ಜೊತೆಗೂಡಿ ಕುಳಿತು ಚರ್ಚೆ ಮಾಡುವುದನ್ನು, ನಟನೆಯನ್ನು ಕಲಿತೆವು. ಆಗ ತಯಾರಿಯ ಅಗತ್ಯ ಬಹಳವಿತ್ತು. ಈಗಿನ ಹಾಗೆ ಹೆಚ್ಚು ಟೇಕ್‌ಗಳನ್ನು ಪಡೆಯುವ ಅವಕಾಶವೇ ಇರಲಿಲ್ಲ. ಈಗ ಶೂಟಿಂಗ್‌ಗೆ ಹೋದ ತಕ್ಷಣ ಎಲ್ಲರೂ ಪ್ರತ್ಯೇಕವಾಗಿ ಬಿಡುತ್ತೇವೆ. ಸಿನಿಮಾ ಶೂಟಿಂಗ್ ಎನ್ನುವುದು ಕಾರ್ಪೊರೇಟ್ ಕಚೇರಿ ಆಗಿಬಿಟ್ಟಿದೆ. ಸಂಭಾಷಣೆ ಹೇಳಿ ಕ್ಯಾರವಾನ್ ಹತ್ತುವುದು ರೂಢಿಯಾಗಿಬಿಟ್ಟಿದೆ.
*ಸಿನಿಪಯಣದಲ್ಲಿ ಮಾಡಿಕೊಂಡ ಬದಲಾವಣೆ...
ಒಂದು ಹಂತದಲ್ಲಿ ನಾನು ಪೂರ್ಣಪ್ರಮಾಣದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಇದರ ಜೊತೆಗೆ ನಟನೆ ಕಷ್ಟವೆಂದೆನಿಸಿತ್ತು. ಹೀಗಾಗಿ ನಟನೆಯಿಂದ ಕೊಂಚ ಬ್ರೇಕ್ ಪಡೆದೆ. ಈ ನಡುವೆ ‘ಗಾಳಿಪಟ–2’ ಹಾಗೂ ‘ಪೌಡರ್’ ಸಿನಿಮಾ ಮಾಡಿದೆ. ಇದೀಗ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಟನೆ ಮೇಲಿನ ಪ್ರೀತಿಯೇ ಮತ್ತೆ ಮತ್ತೆ ಸೆಳೆಯುತ್ತಿದೆ. ಇದೀಗ ‘ಡೆವಿಲ್’ ರಿಲೀಸ್‌ಗೆ ಸಜ್ಜಾಗಿದೆ. ಶಿವರಾಜ್‌ಕುಮಾರ್ ಅವರ ಜೊತೆಗೆ ಎರಡನೇ ಸಿನಿಮಾ ಮಾಡುತ್ತಿದ್ದೇನೆ. ‘ಡ್ಯಾಡ್’ ಶೂಟಿಂಗ್ ನಡೆಯುತ್ತಿದೆ. ಇದರ ಮೂರನೇ ಹಂತದ ಚಿತ್ರೀಕರಣ ಇತ್ತೀಚೆಗೆ ಮುಗಿಯಿತು. ಜನವರಿ ಒಳಗೆ ಇದರ ಚಿತ್ರೀಕರಣ ಮುಗಿಯಲಿದ್ದು, ಮಾರ್ಚ್‌ಗೆ ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ. ಕಥೆಗಳನ್ನು ಕೇಳುತ್ತಿದ್ದೇನೆ. ನನಗೆ ಹತ್ತಾರು ಸಿನಿಮಾ ಮಾಡುವ ಅವಸರವಿಲ್ಲ. 2006ರಲ್ಲಿ ಚಿತ್ರರಂಗಕ್ಕೆ ನಾನು ಬಂದೆ. ನನ್ನ ಜೊತೆ ಬಂದವರೆಲ್ಲ ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುತ್ತಿದ್ದರು. ನಾನು ಒಂದೆರಡು ಸಿನಿಮಾ ಮಾಡುತ್ತಿದ್ದೆ. ಹೀಗಿದ್ದರೂ ಈಗಲೂ ಸಿನಿಮಾ ಮಾಡುತ್ತಿದ್ದೇನೆ. ನಿಧಾನವೇ ಪ್ರಧಾನ ಎನ್ನುವುದು ನನ್ನ ಸಿನಿಪಯಣದಲ್ಲಿ ಕೆಲಸ ಮಾಡಿದೆ ಎನ್ನಬಹುದು.
‘ಶರ್ಮಿಳಾ’ ಸಿನಿಮಾ ಮಾಡಲ್ಲ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಇದೆ. ಇದು ಸುಳ್ಳು. ಒಳ್ಳೆಯ ಕಥೆಗಳು, ಪಾತ್ರಗಳು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇನೆ. ನಟನೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾಡಬೇಕು ಎನ್ನುವುದು ನನ್ನ ಆಸೆ. ಆದರೆ ಇಲ್ಲಿಯವರೆಗೂ ನನ್ನೊಳಗಿನ ನಟನೆಯನ್ನು ಹೊರತೆಗೆಯುವಂಥ ಪಾತ್ರಗಳು ಬರಲಿಲ್ಲ ಎನ್ನುವ ಬೇಸರವಿದೆ.
*‘ಡೆವಿಲ್’ ಸಿನಿಮಾದಲ್ಲಿನ ಪಾತ್ರದ ಅವಧಿ ನೋಡಿದ್ರಾ ಅಥವಾ ಪಾತ್ರವನ್ನಷ್ಟೇ ನೋಡಿದ್ರಾ?
ದೊಡ್ಡ ಸಿನಿಮಾಗಳಲ್ಲಿ ಪರಿಣಾಮಕಾರಿಯಾಗಿರುವ ಸಣ್ಣ ಅವಧಿಯ ಪಾತ್ರಗಳನ್ನು ಬರೆಯುವುದು ಟ್ರೆಂಡ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪಾತ್ರಗಳು ರಾಶಿ ರಾಶಿ ಇರುತ್ತವೆ. ಇವುಗಳಿಗೆ ನಾಲ್ಕೈದು ದೃಶ್ಯಗಳಷ್ಟೇ ಇದ್ದರೂ ಪರಿಣಾಮಕಾರಿಯಾಗಿ ಇರುತ್ತವೆ. ಮಹಿಳಾ ಪ್ರಾಧಾನ್ಯ ಚಿತ್ರಗಳನ್ನೇಕೆ ಮಾಡುತ್ತಿಲ್ಲ, ಒಂದೆರಡು ದೃಶ್ಯಗಳಿರುವ ಸಿನಿಮಾಗಳನ್ನೇಕೆ ಮಾಡುತ್ತೀರಿ ಎಂದು ಕೆಲವರು ಕೇಳುತ್ತಿದ್ದರು. ಈ ಮೊದಲು ನಾನು ಕೇವಲ ನಟಿಯಾಗಿ ಸಿನಿಮಾ ಆಯ್ಕೆ ಮಾಡುತ್ತಿದ್ದೆ. 20ನೇ ವಯಸ್ಸಿನಲ್ಲಿದ್ದಾಗ ತೆರೆ ಅವಧಿಯನ್ನಷ್ಟೇ ಗಮನಿಸುತ್ತಿದ್ದೆ. ಇದೀಗ ಓರ್ವ ನಿರ್ಮಾಪಕಿಯಾಗಿ ಕೇವಲ ಸಿನಿಮಾ ನೋಡುತ್ತಿದ್ದೇನೆ. ನನ್ನ ಪಾತ್ರವನ್ನಷ್ಟೇ ಅಲ್ಲದೆ ಇಡೀ ಸಿನಿಮಾ ಹೇಗೆ ಸಾಗಲಿದೆ, ಪರಿಣಾಮಕಾರಿಯಾಗಿ ಮೂಡಿಬರಲಿದೆ ಎನ್ನುವುದನ್ನು ಗಮನಿಸುತ್ತಿದ್ದೇನೆ. ಜನರೂ ಒಳ್ಳೊಳ್ಳೆಯ ಕಾಂಟೆಂಟ್‌ಗಳನ್ನು ಎದುರು ನೋಡುತ್ತಿದ್ದಾರೆ. ‘ಡೆವಿಲ್’ ಸಿನಿಮಾ ಆಯ್ಕೆಗೂ ಇದೇ ಕಾರಣ. ನಾನು ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ, ದೃಶ್ಯಗಳು ಬಹಳ ಪವರ್‌ಫುಲ್ ಆಗಿವೆ. ಹಿಂದೆಂದೂ ನಾನು ಇಂಥ ಪಾತ್ರ ಮಾಡಿಲ್ಲ.
*ನಿರ್ಮಾಪಕಿಯಾಗಿ ಎದುರಿಸಿದ ಸವಾಲುಗಳು ಹಾಗೂ ಕಲಿತ ಪಾಠವೇನು?
ಬಹಳ ಕಷ್ಟ ಅನುಭವಿಸಿದ್ದೇನೆ. ಮಹಿಳೆಯೊಬ್ಬಳ ಮಾತನ್ನು ಕೇಳಲು ಬಹಳ ಜನ ಇಷ್ಟಪಡುವುದಿಲ್ಲ. ಯೋಗರಾಜ್ ಭಟ್ ಸೇರಿದಂತೆ ಕೆಲವರು ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ಸಿನಿಮಾ ಬಗ್ಗೆ ಏನು ಗೊತ್ತು ಎಂಬ ಮಾತುಗಳನ್ನೂ ಕೇಳಿದ್ದೇನೆ. ಇಂಥ ಸಂದರ್ಭದಲ್ಲಿ ಬೆಂಬಲ ನೀಡುವ ಜನರೊಂದಿಗೆ ಕೆಲಸ ಮಾಡುವ ನಿರ್ಧಾರಕ್ಕೆ ಬಂದೆ. ‘ಡೆವಿಲ್’ನಲ್ಲಿ ನಿರ್ದೇಶಕ ಪ್ರಕಾಶ್ ಅವರ ಪತ್ನಿ ತಶ್ವಿನಿ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದರು. ಅವರ ಕಾರ್ಯವೈಖರಿ ನೋಡಿ ಚಕಿತಳಾದೆ. ಅಷ್ಟು ದೊಡ್ಡ ಸೆಟ್‌ನಲ್ಲಿ ಪ್ರತಿ ದಿನ 400–500 ಜನರನ್ನು ನಿಭಾಯಿಸುತ್ತಿದ್ದರು. ಸೆಟ್‌ನಲ್ಲಿ ವೃತ್ತಿಪರತೆ ಇತ್ತು. ಹಿಂದಿ ಚಿತ್ರರಂಗದಲ್ಲೂ ಇದನ್ನು ನೋಡಿಲ್ಲ. ಇದಕ್ಕೆ ತಾಳ್ಮೆ ಅಗತ್ಯ.
ಸದ್ಯ ತಮಿಳಿನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಕನ್ನಡದಲ್ಲೂ ಸಿನಿಮಾ ನಿರ್ಮಾಣದ ಕನಸು ಇದೆ. ಮೊದಲು ನಿರ್ದೇಶಕನನ್ನು ಆಯ್ಕೆ ಮಾಡಿ, ನಂತರ ಹೀರೊ ಆಯ್ಕೆ ಮಾಡಿ ನಂತರ ಕಥೆ ಬರೆಯುತ್ತಿದ್ದೇವೆ. ಇದು ತಪ್ಪು. ಮೊದಲು ಕಥೆಯ ಆಯ್ಕೆಗೆ ಆದ್ಯತೆ ನೀಡಬೇಕು. ನಮ್ಮ ಬರಹಗಾರರಿಗೆ ಮೊದಲು ಬೆಲೆ ಕೊಡಬೇಕು. ಕನ್ನಡದಲ್ಲಿ ನನಗೆ ಕಥೆ ಒಪ್ಪಿಗೆಯಾದರೆ ಮುಂದಿನ ಹೆಜ್ಜೆ ಇಡುತ್ತೇನೆ. ಒಳ್ಳೆಯ ಕಥೆಗಳಿದ್ದರೆ ಖಂಡಿತವಾಗಿಯೂ ನನ್ನನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.