
ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಅಭಿನಯದ ‘ಶೇಷ 2016’ ಮಾರ್ಚ್ 6ಕ್ಕೆ ತೆರೆಗೆ ಬರಲಿದೆ. ಪ್ರದೀಪ್ ಅರಸೀಕೆರೆ ನಿರ್ದೇಶನದ ಚಿತ್ರ ಕನ್ನಡ ಹಾಗೂ ಮಲಯಾಳದಲ್ಲಿ ಚಿತ್ರೀಕರಣಗೊಂಡಿದೆ.
‘ಪೊಲೀಸ್ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಒಳಿತು ಕೆಡಕಿನ ಸಂಘರ್ಷದ ನಂತರ ಉಳಿದಿರುವುದೇ ‘ಶೇಷ’. 2016ರಲ್ಲಿ ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸುತ್ತ ಬೆಸೆದುಕೊಂಡ ಕಥೆ. ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರದ ಕುರಿತ ಚಿತ್ರವಿದು. ಸರ್ಕಾರಿ ಆಸ್ಪತ್ರೆ, ಶಾಲೆಗಳಿಗೆ ಪರ್ಯಾಯವಾಗಿ ಖಾಸಗಿ ಸಂಸ್ಥೆಗಳಿವೆ. ಆದರೆ ಪೊಲೀಸ್ ಇಲಾಖೆ ಪರ್ಯಾಯ ವ್ಯವಸ್ಥೆಯಿಲ್ಲ. ಇಂಥ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದ ಒಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ಈಗಾಗಲೇ ಖರೀದಿಸಿದೆ’ ಎಂದರು ನಿರ್ದೇಶಕ.
ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್ ಮೂಲಕ ಉಮೇಶ್ ಗೌಡ, ಮಂಜುವಾಣಿ ವಿ.ಎಸ್ ಹಾಗೂ ವೀಣಾ.ಎಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಲಯಾಳ ನಟ ಜಾನ್ ಕೈಪ್ಪಲ್ಲಿ ಕೂಡ ನಟಿಸಿದ್ದಾರೆ.
‘ನನಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಹುಡುಕಿಕೊಂಡು ಬರುತ್ತವೆ. ಆದರೆ ಈ ಚಿತ್ರ ಬಹಳ ವಿಭಿನ್ನವಾಗಿದೆ. ನಾನೇ ಮಲಯಾಳದಲ್ಲೂ ಡಬ್ ಕೂಡ ಮಾಡಿದ್ದೇನೆ. ಇದು ಪೊಲೀಸ್ ಠಾಣೆಯ ಸುತ್ತ ನಡೆಯುವ ಘಟನೆ. ಒಂದು ರೀತಿ ‘ಬೆಲ್ ಬಾಟಮ್’ ಚಿತ್ರದ ಅನುಭವ ನೀಡುತ್ತದೆ. ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟೊನಿ ಕೂಡ ಸದ್ಯದಲ್ಲಿಯೇ ಸೆಟ್ಟೇರಲಿದ್ದು, ಆ ಚಿತ್ರದಲ್ಲಿಯೂ ರಕ್ಷಿತ್ ಜತೆ ನಟಿಸುತ್ತಿರುವೆ’ ಎಂದರು ಪ್ರಮೋದ್ ಶೆಟ್ಟಿ.
ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಆರ್.ಎಸ್. ಆನಂದ ಕುಮಾರ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.