ADVERTISEMENT

ಗಂಡ ತೊರೆದ ನಂತರ ಮಹಿಳೆ ಹೋರಾಟ ನಡೆಸಲೇಬೇಕು: ಶಿಲ್ಪಾ ಶೆಟ್ಟಿ ಭಾವುಕ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 6:06 IST
Last Updated 21 ಆಗಸ್ಟ್ 2021, 6:06 IST
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ   

ಪತಿಯ ಬಂಧನದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ನಿಲ್ಲಿಸಿದ್ದ ನಟಿ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಸೆಟ್‌ಗೆ ಮರಳಿದ್ದಾರೆ.

ಸೂಪರ್‌ ಡ್ಯಾನ್ಸರ್‌ ಚಿತ್ರಿಕರಣದ ವೇಳೆ ನಡೆದ ಘಟನಾವಳಿಗಳು ಶಿಲ್ಪಾ ಅವರನ್ನು ಭಾವುಕರನ್ನಾಗಿ ಮಾಡಿವೆ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಜೀವನವನ್ನು ಆಧರಿಸಿ ಪುಟಾಣಿಯೊಬ್ಬಳು ನೃತ್ಯ ಪ್ರದರ್ಶಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಶಿಲ್ಪಾ , 'ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟದ ಕುರಿತು ಕೇಳಿದಾಗಲೆಲ್ಲಾ ನನ್ನ ತಲೆಯಲ್ಲಿ ಅನೇಕ ವಿಚಾರಗಳು ಓಡುತ್ತವೆ. ಈ ಕಾಲದಲ್ಲಿಯೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ. ಗಂಡ ದೂರವಾದ ನಂತರದಲ್ಲಿ ತಮ್ಮದೇ ಅಸ್ತಿತ್ವಕ್ಕಾಗಿ ಮಹಿಳೆ ಹೋರಾಟ ನಡೆಸುವ ಅನಿವಾರ್ಯತೆ ಇಂದಿಗೂ ಇದೆ' ಎಂದು ನುಡಿದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಸೂಪರ್‌ ಡ್ಯಾನ್ಸರ್‌ ಸ್ಪರ್ಧಿಗಳಿಂದ ದೊರೆತ ಆತ್ಮೀಯ ಸ್ವಾಗತವೂ ಸಹ ಶಿಲ್ಪಾ ಅವರನ್ನು ಭಾವುಕರನ್ನಾಗಿ ಮಾಡಿದೆ.

ADVERTISEMENT

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್‌ ಕುಂದ್ರಾ ಕವಿತಾರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.