ADVERTISEMENT

ಶಿವಾಜಿ ಸುರತ್ಕಲ್ 2: ‘ದಿ ಮಿಸ್ಟೀರಿಯಸ್ ಕೇಸ್ ಆಫ್‌ ಮಾಯಾವಿ’ ಪೋಸ್ಟರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 10:23 IST
Last Updated 1 ಮಾರ್ಚ್ 2022, 10:23 IST
‘ಶಿವಾಜಿ ಸುರತ್ಕಲ್‌–2’ರಲ್ಲಿ ರಮೇಶ್‌ ಅರವಿಂದ್‌
‘ಶಿವಾಜಿ ಸುರತ್ಕಲ್‌–2’ರಲ್ಲಿ ರಮೇಶ್‌ ಅರವಿಂದ್‌   

ನಟ ರಮೇಶ್‌ ಅರವಿಂದ್‌ ಅವರು ನಟಿಸಿದ್ದ ‘ಶಿವಾಜಿ ಸುರತ್ಕಲ್’ ಸಿನಿಮಾದ ಮೊದಲ ಭಾಗ 2020ರ ಮಹಾಶಿವರಾತ್ರಿಯಂದು ತೆರೆ ಕಂಡಿತ್ತು. ಎರಡು ವರ್ಷಗಳ ನಂತರ, ಶಿವರಾತ್ರಿಯಂದೇ(ಮಾ.1) ಚಿತ್ರದ ಎರಡನೇ ಭಾಗದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ.

ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಶಿವಾಜಿ ಸುರತ್ಕಲ್‌’ ಎರಡನೇ ಭಾಗದಲ್ಲಿ, ಹೊಸ ಪ್ರಕರಣವೊಂದರ ಜೊತೆಗೆ ಶಿವಾಜಿ(ರಮೇಶ್‌ ಅರವಿಂದ್‌) ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಮೊದಲ ಭಾಗದಲ್ಲಿ ‘ರಣಗಿರಿ ರಹಸ್ಯ’ ಹೊತ್ತು ತಂದಿದ್ದ ಶಿವಾಜಿ, ಈ ಬಾರಿ ‘ದಿ ಮಿಸ್ಟೀರಿಯಸ್ ಕೇಸ್ ಆಫ್‌ ಮಾಯಾವಿ’ ಭೇದಿಸಲು ಸಜ್ಜಾಗಿದ್ದಾರೆ. ‘ಯಾರು ಈ ಮಾಯಾವಿ? ಶಿವಾಜಿ ತನಗೆ ಎದುರಾದ ಮತ್ತೊಂದು ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸುತ್ತಾರೆ ಎಂಬುವುದೇ ಈ ಸಿನಿಮಾದ ಮೂಲ ಕಥೆ’ ಎಂದಿದೆ ಚಿತ್ರತಂಡ.

‘ಎರಡನೇ ಭಾಗದಲ್ಲಿ ಶಿವಾಜಿ ಅವರ ಖಾಸಗಿ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡುತ್ತೇವೆ. ಚಿತ್ರವು ಮೂರು ಕಾಲಘಟ್ಟಗಳನ್ನು ಒಳಗೊಂಡಿದ್ದು, ಮೂರು ತಲೆಮಾರುಗಳನ್ನೂ ಒಟ್ಟಿಗೆ ತರಲಿದೆ. ಶಿವಾಜಿಯವರ ತಂದೆ ವಿಜೇಂದ್ರ ಸುರತ್ಕಲ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರವನ್ನು ಖ್ಯಾತ ನಟ ನಾಸರ್ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಶಿವಾಜಿಯ ಮಗಳಾದ ಸಿರಿ ಸುರತ್ಕಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಶಿವಾಜಿ ಆಕೆಯನ್ನು ಮುದ್ದಿನಿಂದ ಚುಕ್ಕಿ ಎನ್ನುತ್ತಾರೆ. ಆ ಮುದ್ದು ಮಗಳು ಶಿವಾಜಿಗೆ ಸಿಕ್ಕಿದ್ದೆಲ್ಲಿ? ಈ ಪ್ರಶ್ನೆಗೆ ಉತ್ತರ ಚಿತ್ರದಲ್ಲಿದೆ’ ಎಂದು ವಿವರಿಸಿದೆ ಚಿತ್ರತಂಡ.

ADVERTISEMENT

ರಾಜ್ಯದ ಹಲವೆಡೆ 21 ದಿನಗಳ ಚಿತ್ರೀಕರಣ ಮುಗಿಸಿ ತಂಡವು ಬೆಂಗಳೂರಿಗೆ ಮರಳಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಂದುವರಿಯಲಿದೆ. ರಮೇಶ್ ಅರವಿಂದ್, ರಾಘು ರಮಣಕೊಪ್ಪ ಹಾಗೂ ರಾಧಿಕಾ ನಾರಾಯಣ್ ಅವರು ಮೊದಲ ಚಿತ್ರದಲ್ಲಿ ಕಾಣಿಸಿಕೊಂಡ ಪಾತ್ರಗಳಲ್ಲೇ ಮತ್ತೆ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಹೊಸ ತಾರಾಗಣದಲ್ಲಿ ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರದಲ್ಲಿಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಖ್ಯಾತ ನಟರಾದ ಶೋಭರಾಜ್, ಶ್ರೀನಿವಾಸ ಪ್ರಭು ತಾರಾಗಣ ಸೇರಿದ್ದಾರೆ.

‘ಕನ್ನಡ್‌ ಗೊತ್ತಿಲ್ಲ’ ಹಾಗೂ ‘ಲವ್‌ ಮಾಕ್ಟೇಲ್‌–2’ ಸಿನಿಮಾದ ಸಂಗೀತ ನಿರ್ದೇಶಕ ನಕುಲ್‌ ಅಭಯಂಕರ್‌ ಅವರು ಶಿವಾಜಿ ಸುರತ್ಕಲ್‌–2 ಭಾಗಕ್ಕೂ ಸಂಗೀತ ನೀಡಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.