ADVERTISEMENT

ಶಿವಕುಮಾರ ಶ್ರೀ ಗದ್ದುಗೆ ದರ್ಶನ ಪಡೆದ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:19 IST
Last Updated 11 ಫೆಬ್ರುವರಿ 2019, 14:19 IST
ಶಿವಕುಮಾರ ಸ್ವಾಮೀಜಿ ಗದ್ದುಗೆಯ ಮುಂದೆ ಕೈ ಮುಗಿದು ಕುಳಿತ ಶಿವರಾಜ್ ಕುಮಾರ್
ಶಿವಕುಮಾರ ಸ್ವಾಮೀಜಿ ಗದ್ದುಗೆಯ ಮುಂದೆ ಕೈ ಮುಗಿದು ಕುಳಿತ ಶಿವರಾಜ್ ಕುಮಾರ್   

ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ನಟ ಶಿವರಾಜ್‌ಕುಮಾರ್ ಸೋಮವಾರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರು. ಪೂಜೆ ಸಲ್ಲಿಸಿ ಗದ್ದುಗೆಯ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮೆಲ್ಲರ ನಡೆದಾಡುವ ದೇವರಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆಯನ್ನು ಯಾರೂ ಮೀರಿಸಲಾಗದು. ಶ್ರೀಮಠದ ಮಕ್ಕಳು, ಕಲ್ಲು ಬಂಡೆಗಳು, ಬೆಟ್ಟ ಸೇರಿದಂತೆ ಎಲ್ಲ ರೂಪದಲ್ಲಿ ಶ್ರೀಗಳನ್ನು ಕಾಣಬಹುದು’ ಎಂದರು.

‘ಮನುಕುಲದ ಉದ್ಧಾರಕ್ಕೆ ಶ್ರೀಗಳು ಸಲ್ಲಿಸಿರುವ ಸೇವೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಶ್ರೀಗಳ ಹೆಸರಲ್ಲೇ ಒಂದು ದೊಡ್ಡ ಶಕ್ತಿ ಇದೆ. ಇಷ್ಟು ವರ್ಷ ಹೇಗೆ ಮಠ ನಡೆಯಿತೋ ಅದೇ ರೀತಿ ಮುಂದೆಯೂ ಶ್ರೀಗಳ ಪವಾಡದಿಂದ ಮುನ್ನಡೆಯಲಿದೆ. ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀಗಳಂತೆಯೇ ಮಠವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ’ ಎಂದರು.

ADVERTISEMENT

ಸ್ವಾಮೀಜಿ ಶಿವೈಕ್ಯರಾದಾಗ ನಾನು ಅಮೆರಿಕದಲ್ಲಿ ಇದ್ದೆ. ಸುದ್ದಿ ಕೇಳಿ ನೋವಾಯಿತು. ಈ ಹಿಂದೆ ‘ಟಗರು’ ಸಿನಿಮಾ ಚಿತ್ರೀಕರಣದ ವೇಳೆ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದ ಸಂದರ್ಭವನ್ನು ಎಂದೂ ಮರೆಯಲಾಗದು ಎಂದು ನೆನಪಿಸಿಕೊಂಡರು.

ನಂತರ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಟರಾದ ಗುರುದತ್, ದಯಾನಂದ ಸಾಗರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಜಿಲ್ಲಾ ವಿಷ್ಣು ಸೇನಾ ಸಮಿತಿಯ ಸ್ವಾಧೀನ್‌ ಕುಮಾರ್, ಶಿವಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕುಣಿಗಲ್ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.