ADVERTISEMENT

ಶಿವರಾಜ್ ಕುಮಾರ್ ಸಂದರ್ಶನ | ‘ರುಸ್ತುಂ’ನಲ್ಲಿ ಟಗರು ಶಿವನ ಪ್ರಭಾವ ಇದೆಯಾ?!

ವಿಜಯ್ ಜೋಷಿ
Published 28 ಜೂನ್ 2019, 2:42 IST
Last Updated 28 ಜೂನ್ 2019, 2:42 IST
ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್ಡ
ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್ಡ   

ಶಿವರಾಜ್ ಕುಮಾರ್ ಅಭಿನಯದ, ರವಿವರ್ಮ ನಿರ್ದೇಶನದ ‘ರುಸ್ತುಂ’ ಶುಕ್ರವಾರ ತೆರೆಗೆ ಬರುತ್ತಿದೆ. ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿ ‍ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವರಾಜ್‌ ಕುಮಾರ್‌ ‘ರುಸ್ತುಂ’ಗಾಗಿ ಮತ್ತೆ ಪೊಲೀಸ್ ಸಮವಸ್ತ್ರ ತೊಟ್ಟಿದ್ದಾರೆ. ಮಫ್ತಿ, ಟಗರು ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ ಕಾರಣ, ರುಸ್ತುಂ ಬಗ್ಗೆಯೂ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟಗರು ಚಿತ್ರದಲ್ಲಿ ಹ್ಞೂಂಕರಿಸಿದ್ದ ಶಿವಣ್ಣ, ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಯಾವ ರೀತಿಯಲ್ಲಿ ಎಂಬ ಕುತೂಹಲದಲ್ಲಿ ವೀಕ್ಷಕರು ಇದ್ದಾರೆ. ‘ರುಸ್ತುಂ’ ಬಿಡುಗಡೆಗೆ ಮುನ್ನ ಶಿವಣ್ಣ ‘ಸಿನಿಮಾ ಪುರವಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಒಂದಾದ ಮೇಲೊಂದರಂತೆ ಹಿಟ್ ಚಿತ್ರ ನೀಡಿರುವ ಹೊತ್ತಿನಲ್ಲಿ, ರುಸ್ತುಂ ತೆರೆಗೆ ಬರುತ್ತಿದೆ. ನಿಮ್ಮ ನಿರೀಕ್ಷೆಗಳು ಏನಿವೆ?
ಹಿಟ್ ಆಗಿರುವ ಇತ್ತೀಚಿನ ಚಿತ್ರಗಳು ಒಂಚೂರು ಕ್ಲಾಸಿಕ್‌ ಸಿನಿಮಾಗಳು. ಅವು ವಿಭಿನ್ನವಾದ ಚಿತ್ರಕಥೆ ಹೊಂದಿದ್ದವು. ಮಫ್ತಿ ಒಂದು ರೀತಿ ಇತ್ತು, ಶಿವಲಿಂಗ ಇನ್ನೊಂದು ರೀತಿ ಇತ್ತು. ಅವು ಪಕ್ಕಾ ಕಮರ್ಷಿಯಲ್ ಸಿನಿಮಾಗಳಾಗಿದ್ದವು ಎನ್ನಲಾಗದು. ಈಗ ತೆರೆಗೆ ಬರುತ್ತಿರುವ ರುಸ್ತುಂ ಪಕ್ಕಾ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ಸೇರುವಂಥದ್ದು. ಒಳ್ಳೆಯ ಸಂಭಾಷಣೆ ಇದರಲ್ಲಿದೆ– ಹಾಗಂತ ಪಂಚಿಂಗ್ ಸಂಭಾಷಣೆ ಇರಬೇಕು ಎಂದು ಮಾಡಿದ್ದಲ್ಲ ಇದು. ಇದರಲ್ಲಿ ತುಸು ಭಾವುಕ ಅಂಶಗಳು ಕೂಡ ಇವೆ. ಇದರ ಮೇಕಿಂಗ್ ತುಸು ಭಿನ್ನವಾಗಿದೆ. ರವಿವರ್ಮ ಅವರು ಸಾಹಸ ನಿರ್ದೇಶನದಲ್ಲಿ ಹೆಸರು ಮಾಡಿದವರು. ಅವರು ಸಿನಿಮಾ ಹೇಗೆ ಮಾಡಿರಬಹುದು ಎಂಬ ಕುತೂಹಲ ವೀಕ್ಷಕರಲ್ಲಿ ಇರುತ್ತದೆ.

ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೀರಿ. ಟಗರು ಸಿನಿಮಾದಲ್ಲಿ ಕೂಡ ನಿಮ್ಮದು ಪೊಲೀಸ್ ಪಾತ್ರವೇ ಆಗಿತ್ತು. ಟಗರು ಹಾಗೂ ರುಸ್ತುಂ ನಡುವೆ ವ್ಯತ್ಯಾಸ ಏನು?
ಟಗರು ಚಿತ್ರಕಥೆ ಬೇರೆಯದೇ ಆಗಿತ್ತು. ಅದು ಒಂದರ್ಥದಲ್ಲಿ ಡೈರೆಕ್ಟರ್ಸ್‌ ಫಿಲಂ. ಅದರಲ್ಲಿನ ಕಥೆ ಮಾಮೂಲಿನದ್ದೇ. ಅಲ್ಲಿರುವುದು ಕೂಡ ಪೊಲೀಸ್ ಹಾಗೂ ಕಿಡಿಗೇಡಿ. ಅದನ್ನು ಚಿತ್ರಕಥೆಯ ಮೂಲಕ ವಿಭಿನ್ನವಾಗಿ ತೋರಿಸಿದರು ನಿರ್ದೇಶಕ ಸೂರಿ. ಚಿತ್ರಕಥೆಯ ಮೂಲಕವೇ ಅವರು ಗೆದ್ದರು. ರುಸ್ತುಂ ಸಿನಿಮಾದಲ್ಲಿ ಕಥೆ ಹೇಳುವ ರೀತಿ ಬಹಳ ಸ್ಮೂತ್ ಆಗಿದೆ. ಟಗರು ಸಿನಿಮಾದಲ್ಲಿನ ಪಾತ್ರಕ್ಕಿಂತ ಹೆಚ್ಚು ಖಡಕ್ ಆಗಿರುವ ಆ್ಯಟಿಟ್ಯೂಡ್‌ ಈ ಸಿನಿಮಾದಲ್ಲಿನ ಪಾತ್ರ ಹೊಂದಿದೆ.

ADVERTISEMENT

ಟಗರು ಶಿವ ಎನ್ನುವ ಪೊಲೀಸ್ ಅಧಿಕಾರಿಯ ಪಾತ್ರ ನಾನು ಅದುವರೆಗೆ ಮಾಡಿದ ಪೊಲೀಸ್ ಪಾತ್ರಗಳಿಗಿಂತ ಭಿನ್ನವಾಗಿತ್ತು. ರುಸ್ತುಂ ಸಿನಿಮಾದಲ್ಲಿನ ಪೊಲೀಸ್‌ ಅಧಿಕಾರಿ ಪಾತ್ರ ಕೂಡ ಭಿನ್ನ ಎಂದು ಭಾವಿಸಿದ್ದೇನೆ. ಇದರಲ್ಲಿ ಬೇರೆ ಯಾವುದೇ ಪಾತ್ರದ ಪ್ರಭಾವ ಇಲ್ಲ. ಉಡುಪು, ದೈಹಿಕ ಹಾವಭಾವಗಳಲ್ಲಿ ಒಂದು ಸ್ಟೈಲ್‌ ಕಾಣಬಹುದು. ನಾನು ಎಷ್ಟರಮಟ್ಟಿಗೆ ಪಾತ್ರವನ್ನು ವಿಭಿನ್ನವಾಗಿ ನಿಭಾಯಿಸಿದ್ದೇನೆ ಎಂಬುದನ್ನು ವೀಕ್ಷಕರು ತೀರ್ಮಾನಿಸಬೇಕು. ಸಾಹಸ ದೃಶ್ಯಗಳು, ಕೆಲವು ಭಾವುಕ ದೃಶ್ಯಗಳು ಇದರಲ್ಲಿ ಬಹಳ ಚೆನ್ನಾಗಿ ಮೂಡಿಬಂದಿವೆ.

‘ಟಗರು’ ಪಾತ್ರದ ಪ್ರಭಾವ ಈ ಪಾತ್ರ ನಿಭಾಯಿಸುವಾಗ ಬಂದಿತ್ತಾ?
ಒಂದಿಷ್ಟು ಪ್ರಭಾವ ಆಗಿರಬಹುದೇನೋ?! ಪ್ರಭಾವ ಆಗಿದ್ದರೂ ತಪ್ಪೇನೂ ಇಲ್ಲ. ಟಗರು ಶಿವ ಪಾತ್ರದಲ್ಲಿ ಮೌನ ಇದೆ. ಆದರೆ ರುಸ್ತುಂ ಚಿತ್ರದಲ್ಲಿನ ಪಾತ್ರಕ್ಕೆ ಮೌನವನ್ನು ಕಾಯ್ದುಕೊಳ್ಳಲು ಆಗುವುದಿಲ್ಲ. ರುಸ್ತುಂ ಚಿತ್ರದ ಪಾತ್ರ ಆಕ್ರೋಶವನ್ನು ಹೊರಹಾಕಿಬಿಡುತ್ತದೆ. ಇಲ್ಲಿನ ಪಾತ್ರಕ್ಕೆ ತಾಳ್ಮೆಯನ್ನು ಮೀರಿಸುವ ಕೋಪ ಬರುತ್ತದೆ.

ರುಸ್ತುಂ ಪೋಸ್ಟರ್‌ನಲ್ಲಿ ನೀವು ಎರಡು ಶೇಡ್‌ಗಳಲ್ಲಿ ಕಾಣಿಸುತ್ತೀರಿ. ಎರಡು ಶೇಡ್‌ಗಳನ್ನು ನಿಭಾಯಿಸುವಾಗಿನ ನಿಮ್ಮ ಅನುಭವ ಏನು?
ಈ ಚಿತ್ರದ ಚಿತ್ರಕಥೆಗೆ ಅನುಗುಣವಾಗಿ ಆ ರೀತಿ ಮಾಡಲಾಗಿದೆ. ಆತನ ಗುರಿ ಏನು, ಅದನ್ನು ಎಷ್ಟರಮಟ್ಟಿಗೆ ತಲುಪುತ್ತಾನೆ ಎಂಬುದನ್ನು ಈ ಪಾತ್ರ ಒಳಗೊಂಡಿದೆ. ಈತನಿಗೆ ಮಗಳಿದ್ದಾಳೆ, ಕುಟುಂಬ ಇದೆ. ಎರಡು ಶೇಡ್‌ಗಳನ್ನು ನಿಭಾಯಿಸುವುದು ಸವಾಲಿನ ಕಾರ್ಯವೇನೂ ಆಗಿರಲಿಲ್ಲ. ಏಕೆಂದರೆ ಪಾತ್ರದ ಮೂಲಗುಣ ಒಂದೇ.

**

ರುಸ್ತುಂ ಚಿತ್ರದ ಎಲ್ಲ ಕಲಾವಿದರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ವಿವೇಕ್‌ ಒಬೆರಾಯ್, ಹರೀಶ್ ಉತ್ತಮನ್, ರಚಿತಾ ರಾಮ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಗಳಿಗೆ ಬಹಳ ಚೆನ್ನಾಗಿ ನ್ಯಾಯ ಒದಗಿಸಿದ್ದಾರೆ. ತಾಂತ್ರಿಕ ವರ್ಗದವರೂ ಬಹಳ ಚೆನ್ನಾಗಿ ಕೆಲಸ ನಿಭಾಯಿಸಿದ್ದಾರೆ. ಕಣ್ಣಿಗೂ ಖುಷಿ ಕೊಡುವ ಒಳ್ಳೆಯ ಸಿನಿಮಾ ಇದು.
-ಶಿವರಾಜ್‌ ಕುಮಾರ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.