
ಶಿವರಾಜ್ಕುಮಾರ್ ನಟಿಸುತ್ತಿರುವ ತೆಲುಗು ಸಿನಿಮಾ ‘ಗುಮ್ಮಡಿ ನರಸಯ್ಯ’ ಇತ್ತೀಚೆಗಷ್ಟೇ ಸೆಟ್ಟೇರಿದೆ. ಗೀತಾ ಶಿವರಾಜ್‌ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಪರಮೇಶ್ವರ್ ಹಿವ್ರಾಳೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸರಳ ಜೀವನ ನಡೆಸುತ್ತಿರುವ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಸ್ವತಃ ಗುಮ್ಮಡಿ ನರಸಯ್ಯ ಅವರೇ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
‘ಗುಮ್ಮಡಿ ಅವರಂಥ ಉದಾತ್ತ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಈ ಅವಕಾಶಕ್ಕಾಗಿ ಪರಮೇಶ್ವರ್ ಅವರು ಮತ್ತು ಎನ್. ಸುರೇಶ್ ರೆಡ್ಡಿ ಅವರಿಗೆ ನನ್ನ ಧನ್ಯವಾದಗಳು. ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯರಂತೆಯೇ ಜನ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ನಾನು ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ನಾನು ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ. ಈ ಚಿತ್ರವು ಎಲ್ಲಾ ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ’ ಎಂದರು ಶಿವರಾಜ್‌ಕುಮಾರ್.
ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎನ್. ಸುರೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದ್ದು, ಶಿವಣ್ಣ ಧೋತಿ ಉಟ್ಟು, ಶರ್ಟ್ ಮೇಲೆ ಕೆಂಪು ಬಣ್ಣದ ಶಾಲು ಹೊದು, ಸೈಕಲ್ ತುಳಿಯುತ್ತ ಸರಳ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.