ADVERTISEMENT

ನಟ ಶಿವರಾಜ್‌ಕುಮಾರ್‌ ನೇತೃತ್ವದ ನಿಯೋಗದಿಂದ ಡಿಸಿಎಂ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 14:06 IST
Last Updated 13 ಆಗಸ್ಟ್ 2020, 14:06 IST
ಬೆಂಗಳೂರಿನಲ್ಲಿ ಗುರುವಾರ ನಟ ಶಿವರಾಜ್‌ಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗವು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವಥ್‌ನಾರಾಯಣ ಅವರನ್ನು ಭೇಟಿ ಮಾಡಿತು‌
ಬೆಂಗಳೂರಿನಲ್ಲಿ ಗುರುವಾರ ನಟ ಶಿವರಾಜ್‌ಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗವು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವಥ್‌ನಾರಾಯಣ ಅವರನ್ನು ಭೇಟಿ ಮಾಡಿತು‌   

ಕೋವಿಡ್‌–19 ಪರಿಣಾಮ ಕನ್ನಡ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಈ ಉದ್ಯಮ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ನೂರಾರು ಕಲಾವಿದರು, ಕಾರ್ಮಿಕರ ಬದುಕು ದಿಕ್ಕೆಟ್ಟಿದೆ. ಚಿತ್ರಮಂದಿರಗಳ ಪ್ರದರ್ಶನಕ್ಕೆ ಇನ್ನೂ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ, ಚಿತ್ರೋದ್ಯಮದ ಚೇತರಿಕೆಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುತ್ತದೆಯೇ ಎಂದು ಕನ್ನಡ ಚಿತ್ರರಂಗ ಎದುರು ನೋಡುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿರುವ ನಟ ಶಿವರಾಜ್‌ಕುಮಾರ್‌ ಅವರ ನಿವಾಸದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರು ಮತ್ತು ನಿರ್ಮಾಪಕರ ಸಂಘದ ನೇತೃತ್ವದಡಿ ಸಭೆ ನಡೆದಿತ್ತು. ಸಭೆಯಲ್ಲಿ ಶಿವಣ್ಣ ಅವರಿಗೆ ಚಿತ್ರರಂಗದ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು.

ಈ ಸಭೆಯ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಸಮ್ಮುಖದಲ್ಲಿ ಶಿವಣ್ಣ ಅವರ ನಿವಾಸದಲ್ಲಿಯೇ ಮತ್ತೊಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.

ADVERTISEMENT

ಶಿವರಾಜ್‌ಕುಮಾರ್‌ ಅವರು ಚಿತ್ರರಂಗದ ಸಾರಥ್ಯವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ, ಯಡಿಯೂರಪ್ಪ ಅವರಿಗೆ ಕೋವಿಡ್‌–19 ಸೋಂಕು ಕಾಣಿಸಿಕೊಂಡ ಪರಿಣಾಮ ಭೇಟಿ ಸಾಧ್ಯವಾಗಿರಲಿಲ್ಲ.

ಗುರುವಾರ ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಉಪ ಮುಖ್ಯಮಂತ್ರಿ ನಿವಾಸದಲ್ಲಿ ಡಿಸಿಎಂ.ಡಾ.ಸಿ.ಎನ್‌. ಅಶ್ವಥ್‌ ನಾರಾಯಣ ಅವರನ್ನು ಶಿವರಾಜ್‌ಕುಮಾರ್‌ ನೇತೃತ್ವದ ಚಿತ್ರರಂಗದ ನಿಯೋಗ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿತು. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಡಿಸಿಎಂ ಗಮನಕ್ಕೆ ತರಲಾಯಿತು.

‘ಕಳೆದ ಮಾರ್ಚ್‌ನಿಂದಲೂ ಚಿತ್ರೋದ್ಯಮದ ಚಟುವಟಿಕೆ ಸ್ಥಗಿತಗೊಂಡಿದೆ. ಇದರಿಂದ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕಿದೆ. ಹಾಗಾಗಿ, ವಿಶೇಷ ಪ್ಯಾಜೇಕ್‌ ಘೋಷಿಸುವ ಮೂಲಕ ಚಿತ್ರರಂಗದ ನೆರವಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಡಿಸಿಎಂ ಅವರಿಗೆ ಶಿವಣ್ಣ ಮನವರಿಕೆ ಮಾಡಿಕೊಟ್ಟರು.

‘ಕೋವಿಡ್‌–19 ಹಿನ್ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕನ್ನಡ ಚಿತ್ರರಂಗದ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ನಟ ಶಿವರಾಜ್‌ಕುಮಾರ್‌ಅವರ ನೇತೃತ್ವದಲ್ಲಿ ಚಿತ್ರರಂಗದ ನಿಯೋಗ ನನ್ನನ್ನು ಭೇಟಿ ಮಾಡಿತು.ಕಲಾವಿದರು, ತಂತ್ರಜ್ಞರು ಮತ್ತು ನೌಕರರಿಗೆ ತಲೆದೋರಿರುವ ಸಂಕಷ್ಟಗಳ ಪರಿಹಾರದ ಕುರಿತು ಚರ್ಚಿಸಲಾಯಿತು’ ಎಂದು ಅಶ್ವಥ್‌ನಾರಾಯಣ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.