ಅದು ಮೂರನೇ ತರಗತಿ. ಕುರ್ಚಿಯಲ್ಲಿ ಆನಂದ್ ಮೇಷ್ಟ್ರು (ಶಿವರಾಜ್‌ಕುಮಾರ್) ಕುಳಿತಿದ್ದಾರೆ. ತಮ್ಮ ಆನಂದ್ ಮೇಷ್ಟ್ರ ಕಥೆ ಹೇಳ್ತಾ ‘ಜೋಗಿ’ ಮಟ್ಟಕ್ಕೆ ಬಿಲ್ಡ್‌ಅಪ್ ಕೊಡ್ತಿದ್ದಾರೆ ಪುಟಾಣಿ ವಿದ್ಯಾರ್ಥಿಗಳು. ಇವರ ಮಾತುಗಳನ್ನು ಕೇಳಿ ಮೇಷ್ಟ್ರು ಮುಗುಳ್ನಗುತ್ತಿದ್ದಾರೆ. ಇವೆಲ್ಲವನ್ನೂ ಬೆಂಚ್‌ನಲ್ಲಿ ಕುಳಿತ ಪತ್ರಕರ್ತರು ಕೇಳುತ್ತಿದ್ದಾರೆ... ಹೀಗೊಂದು ವಿಶೇಷವಾದ ಸುದ್ದಿಗೋಷ್ಠಿ ನಡೆದಿದ್ದು ಶ್ರೀನಿ ನಿರ್ದೇಶನದ ‘ಎ ಫಾರ್ ಆನಂದ್’ ಮುಹೂರ್ತದ ಸಂದರ್ಭದಲ್ಲಿ.
ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ (ಮೇ 2) ‘ಎ ಫಾರ್ ಆನಂದ್’ ಮುಹೂರ್ತ ನಡೆಯಿತು. ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಕ್ಲ್ಯಾಪ್ ಮಾಡಿದರು. ‘ವೇದ’ ಹಾಗೂ ‘ಭೈರತಿ ರಣಗಲ್’ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ‘ಇದು ‘ಘೋಸ್ಟ್’ ಬಳಿಕ ಶ್ರೀನಿ ಜೊತೆ ಎರಡನೇ ಸಿನಿಮಾ. ಹಲವು ಮಕ್ಕಳ ಸಿನಿಮಾಗಳು ಬಂದಿವೆ. ‘ವಿಲ್ಲಿ ವೋಂಕಾ’ ಚಿತ್ರದಲ್ಲಿ ಚಾಕೊಲೇಟ್ ಫ್ಯಾಕ್ಟರಿ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ಚಾಕೊಲೇಟ್ ಇಲ್ಲ. ಇಲ್ಲಿ ಸಿಹಿಯಾದ ಮಾತಿನ ಫ್ಯಾಕ್ಟರಿ ಇದೆ. ಚಾಕೊಲೇಟ್ ರೀತಿಯ ನಡವಳಿಕೆ ಇರುತ್ತದೆ. ಇದೇ ಕಂಪಿನಲ್ಲಿ ಹೇಗೆ ಮಕ್ಕಳಿಗೆ ಶಿಕ್ಷಣ ನೀಡುತ್ತೇವೆ, ಅವರನ್ನು ಬೆಳಕಿಗೆ ತರುತ್ತೇವೆ ಎನ್ನುವುದೇ ಸಿನಿಮಾ ಕಥೆ. ಬಹಳ ಮನರಂಜನಾತ್ಮಕವಾಗಿ ಈ ಸಿನಿಮಾವಿರಲಿದೆ. ಮಕ್ಕಳು ಹಾಗೂ ಶಿಕ್ಷಕರನ್ನು ಪರಸ್ಪರ ಬೆಸೆಯುವ ಸಿನಿಮಾ ಇದಾಗಲಿದೆ. ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿರಲಿದ್ದು, ಆರು ಹಾಡುಗಳು ಇರಲಿವೆ. ‘ಆನಂದ್’ ಎಂಬ ಶೀರ್ಷಿಕೆಯನ್ನು ಅಮ್ಮ ಇಟ್ಟಿದ್ದರು. ಈ ಆನಂದ ಎಲ್ಲ ಮಕ್ಕಳ ಮುಖದಲ್ಲಿ ಏನು ಆನಂದ ತರಲಿದ್ದಾನೆ ಎನ್ನುವುದನ್ನು ಕಾದುನೋಡಿ. ಈ ಸಿನಿಮಾ ಇವತ್ತಿನ ಶಿಕ್ಷಣ ವ್ಯವಸ್ಥೆಗೇ ದೊಡ್ಡ ಪಾಠ ಆಗಲಿದೆ. ಶಿವಣ್ಣ ಇಲ್ಲಿ ಸ್ಟಾರ್ ಆಗಿ ಅಲ್ಲ ಮೇಷ್ಟ್ರಾಗಿ ನಟಿಸುತ್ತಿದ್ದಾನೆ’ ಎಂದರು.
‘ಎ ಫಾರ್ ಆನಂದ್ ಐಡಿಯಾ ಶುರುವಾಗಿದ್ದೇ ಗೀತಾ ಶಿವರಾಜ್‌ಕುಮಾರ್ ಅವರಿಂದ’ ಎಂದು ಮಾತು ಆರಂಭಿಸಿದ ಶ್ರೀನಿ, ‘‘ಘೋಸ್ಟ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಎಳೆಯನ್ನು ಮುಂದಿಟ್ಟು ನೀವೇ ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದರು ಗೀತಾ ಶಿವರಾಜ್‌ಕುಮಾರ್. ಇದೊಂದು ದೊಡ್ಡ ಜವಾಬ್ದಾರಿ. ಮುದ್ದಾದ ಒಳ್ಳೆಯ ಕೌಟುಂಬಿಕ ಮನರಂಜನಾತ್ಮಕ ಸಿನಿಮಾ ಇದು. ಶೀರ್ಷಿಕೆ ಹುಡುಕುತ್ತಾ, ಶಿವಣ್ಣ ಅವರ ಮೊದಲ ಸಿನಿಮಾದ ಶೀರ್ಷಿಕೆಯನ್ನೇ ಬಳಸಿಕೊಂಡು ‘ಎ ಫಾರ್ ಆನಂದ್’ ಎಂದು ಇಟ್ಟೆವು. ಯಾಕೀ ಶೀರ್ಷಿಕೆ ಇಟ್ಟೆವು ಎನ್ನುವುದಕ್ಕೆ ಕಥೆಯೊಳಗೆ ಸಂದರ್ಭಗಳು ಇವೆ. ಇದು ಒಂದು ಹೊಸ ಜಾನರ್‌ನ ಸಿನಿಮಾ. ಇಡೀ ಕುಟುಂಬವೇ ಜೊತೆಗೂಡಿ ನೋಡಬೇಕಾದ ಸಿನಿಮಾ. ಶಿವರಾಜ್‌ಕುಮಾರ್ ಅವರ ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ಮಕ್ಕಳ ಜೊತೆ ಶಿವಣ್ಣನೂ ಮಕ್ಕಳಾಗೇ ಇರುತ್ತಾರೆ. ಹೀಗಾಗಿ ಕಥೆ ಬರೆಯುವುದು ಸುಲಭ’ ಎಂದರು.
‘ಘೋಸ್ಟ್’ ಸಿನಿಮಾಗೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಗೂ ಕೆಲಸ ಮಾಡಲಿದೆ. ಮಹೇನ್ ಸಿಂಹ ಛಾಯಾಚಿತ್ರಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ಪ್ರಸನ್ನ ವಿ.ಎಂ. ಸಂಭಾಷಣೆ ಬರೆದಿದ್ದಾರೆ.
ಮಕ್ಕಳ ಸಿನಿಮಾ ಮಾಡಬೇಕು ಎನ್ನುವುದು ಬಹಳ ವರ್ಷಗಳ ಆಸೆ. ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಆದರೆ ಈಗ ಮಕ್ಕಳಿಗೆ ಒತ್ತಡ ಹೆಚ್ಚಿದೆ. ಯಾವುದೇ ಒತ್ತಡ ಹಾಕದೆ ಮಕ್ಕಳಿಗೆ ಹೇಗೆ ಪಾಠ ಮಾಡಬಹುದು ಎನ್ನುವುದನ್ನು ಸಿನಿಮಾದಲ್ಲಿ ಹೇಳಲಿದ್ದೇವೆ.–ಗೀತಾ ಶಿವರಾಜ್‌ಕುಮಾರ್, ನಿರ್ಮಾಪಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.