
ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ನಾಯಕನಾಗಿ ಕಾಣಿಸಿಕೊಂಡಿರುವ ‘ಇವನೇ ಶ್ರೀನಿವಾಸ’ ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರಕ್ಕೆ ಎಸ್.ಕುಮಾರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಪ್ರತಾಪ್ ನಾಯಕನಾಗಿ ನಟಿಸುವ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಪ್ರತಿದಿನ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಕ್ರೈಂ, ವಂಚನೆಯ ಬಗ್ಗೆ ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ನಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಬಾರದು. ಇದರಿಂದ ನಮ್ಮ ಮಾಹಿತಿ ತಿಳಿದುಕೊಳ್ಳುವ ವಂಚಕರು ಹೇಗೆ ಕಿರುಕುಳ, ತೊಂದರೆ ನೀಡುತ್ತಾರೆ ಎಂಬುದೇ ಚಿತ್ರಕಥೆ’ ಎಂದರು ನಿರ್ದೇಶಕ.
ನಾಯಕಿಯಾಗಿ ಪ್ರಿಯಾ ಆರಾಧ್ಯ ನಟಿಸಿದ್ದಾರೆ. ಮೋಹನ್ ಜುನೇಜಾ ಅವರು ನಟಿಸಿದ ಕೊನೆಯ ಚಿತ್ರವಿದು. ಚಿಲ್ಲರ್ ಮಂಜ, ಸುಶ್ಮಿತಾ ಉಳಿದ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳು ಹಾಗೂ ಮೂರು ಹಾಡುಗಳಿದ್ದು ಹರ್ಷ ಕೋಗೋಡ್, ಶ್ರೀಹರಿ, ಸುಭಾಶ್ ಸಂಗೀತವಿದೆ. ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ಅರವಿಂದರಾಜ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.