ADVERTISEMENT

ನಾಗಚೈತನ್ಯ–ಶೋಭಿತಾ ವಿವಾಹ: ಧೂಲಿಪಾಲ ಕುಟುಂಬದಲ್ಲಿ ‘ಪೆಳ್ಳಿ ಕುತುರು’ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2024, 10:47 IST
Last Updated 2 ಡಿಸೆಂಬರ್ 2024, 10:47 IST
   

ಹೈದರಾಬಾದ್‌: ನಟ ಅಕ್ಕಿನೇನಿ ನಾಗಚೈತನ್ಯ ಮತ್ತು ನಟಿ ಶೋಭಿತಾ ಧೂಲಿಪಾಲ ಅವರ ವಿವಾಹವು ಇನ್ನೆರಡು ದಿನದಲ್ಲಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೊದಲ್ಲಿ ನೆರವೇರಲಿದ್ದು, ಧೂಲಿಪಾಲ–ಅಕ್ಕಿನೇನಿ ಕುಟುಂಬದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.

ಅಪ್ಪಟ ತೆಲುಗು ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿದ್ದು, ಸೋಮವಾರ ರಾತ ಸ್ಥಾಪನ(ಹಳದಿ ಶಾಸ್ತ್ರ) ಮತ್ತು ಮಂಗಳಸ್ನಾನ ಕಾರ್ಯಕ್ರಮಗಳು ನಡೆದಿವೆ. ಮಂಗಳವಾರ ಧೂಲಿಪಾಲ ಕುಟುಂಬದಲ್ಲಿ ‘ಪೆಳ್ಳಿ ಕುತುರು’ ಸಮಾರಂಭದ ಸಂಭ್ರಮ ಮನೆಮಾಡಿದೆ.

‘ಪೆಳ್ಳಿ ಕುತುರು’ ದಕ್ಷಿಣ ಭಾರತದ ಅದರಲ್ಲಿಯೂ ತೆಲಗು ಮಾತನಾಡುವ ಸಮುದಾಯದವರು ಆಚರಿಸಿಕೊಂಡು ಬಂದಿರುವ ಒಂದು ವಿವಾಹ ಪೂರ್ವ ಸಂಪ್ರದಾಯವಾಗಿದೆ. ಈ ವಿಶೇಷ ಸಮಾರಂಭದಲ್ಲಿ ವಧುವಿನ ಕುಟುಂಬದವರೆಲ್ಲರೂ ಪಾಲ್ಗೊಂಡು ಆಕೆಯ ವೈವಾಹಿಕ ಜೀವನ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಹಾರೈಸುತ್ತಾರೆ.

ADVERTISEMENT

ಸಮಾರಂಭದ ಭಾಗವಾಗಿ ವಧುವನ್ನು ಅರಿಶಿನ, ಗುಲಾಬಿ ಜಲ(ರೋಸ್ ವಾಟರ್) ಮತ್ತು ಇತರ ಅಗತ್ಯ ಪದಾರ್ಥಗಳನ್ನು ಬೆರೆಸಿ ತಯಾರಿಸಿದ ಮಿಶ್ರಣದಿಂದ ಸ್ನಾನ ಮಾಡಿಸಲಾಗುತ್ತದೆ. ಈ ಮಿಶ್ರಣವು ವಧುವಿಗೆ ಕೆಟ್ಟ ದೃಷ್ಟಿ ತಾಗದಂತೆ ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಇಂದಿನ ಸಮಾರಂಭದಲ್ಲಿ ಕೆಂಪು ಸೀರೆ ಉಟ್ಟಿರುವ ಶೋಭಿತಾ ಅವರು, ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ‘ಪೆಳ್ಳಿ ಕುತುರು’ ಸಮಾರಂಭದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.